ತಮ್ಮವರನ್ನು ಕಳೆದುಕೊಂಡ ನೋವಿನ ನಡುವೆಯೂ ಕೃತಜ್ಞತೆ ( Kerala Air India crash) ಸಲ್ಲಿಸಿದವರಿಗೆ ಹೇಳಿ ಸಲಾಂ
ತಿರುವನಂತಪುರ : 2 ವರ್ಷಗಳ ಹಿಂದೆ ಕೇರಳದ ಕಾರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತವನ್ನು ( Kerala Air India crash) ಅನೇಕರು ಮರೆತಿರಬಹುದು. ಆದರೆ ಆ ಘಟನೆಯಲ್ಲಿ ಮೃತಪಟ್ಟ, ಬದುಕಿ ಬಂದ ಮತ್ತು ರಕ್ಷಣೆಗೆ ಧಾವಿಸಿದ ಮಂದಿ ಮರೆಯಲು ಸಾಧ್ಯವಿಲ್ಲ. ಅಷ್ಟೊಂದು ಘನಘೋರ ದುರಂತವಾಗಿತ್ತು ಅದು.
2020ರ ಆಗಸ್ಟ್ 7 ರಂದು 190 ಪ್ರಯಾಣಿಕರನ್ನು ಹೊತ್ತ ವಿಮಾನ ದುಬೈನಿಂದ ಕಾರಿಪುರ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಟೇಬಲ್ ಟಾಪ್ ರನ್ ವೇ ದಾಟಿದ ವಿಮಾನ 35 ಅಡಿ ಆಳದ ಕಣಿವೆಗೆ ಉರುಳಿ ಎರಡು ತುಂಡಾಗಿತ್ತು. ದುರಂತದಲ್ಲಿ 16 ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ : chamrajpet ground : ನಮಾಜ್ ಮಾಡಬಹುದು ಅಂದ ಮೇಲೆ ಗಣೇಶೋತ್ಸವಕ್ಕೆ ಅವಕಾಶ ಯಾಕಿಲ್ಲ : ಜಮೀರ್ ವಿರುದ್ಧ ತಿರುಗಿ ಬಿದ್ದ ಹಿಂದು ಸಂಘಟನೆಗಳು
ರಾತ್ರಿ ವೇಳೆ ವಿಮಾನ ಅಪಘಾತ ಸಂಭವಿಸುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸುವ ಮುನ್ನ ಸ್ಥಳೀಯರು ಧಾವಿಸಿದ್ದರು. ಸಿಕ್ಕ ಸಿಕ್ಕ ವಾಹನಗಳಲ್ಲಿ ಗಾಯಾಳುಗಳನ್ನು ಸಾಗಿಸಿದ್ದರು. ಸ್ಥಳೀಯರ ನೆರವಿನ ಕಾರಣದಿಂದಲೇ ಅನೇಕರು ಬದುಕಿದ್ದರು ಕೂಡಾ.
ಇದೀಗ ಸ್ಥಳೀಯರ ಸಹಾಯಕ್ಕೆ ಕೃತಜ್ಞತೆಯಾಗಿ ಸಾರ್ವಜನಿಕ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಘಟನೆಯಲ್ಲಿ ಮೃತಪಟ್ಟ ಮತ್ತು ಬದುಕುಳಿದ ಪ್ರಯಾಣಿಕರ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ವಿಮಾನ ದುರಂತ ನಡೆದ ಸ್ಥಳದಲ್ಲೇ ಆಸ್ಪತ್ರೆ ನಿರ್ಮಾಣವಾಗಲಿದ್ದು, ಈ ಸಂಬಂಧ ದುರಂತ ನಡೆದ ದಿನದಂದೇ ಜಿಲ್ಲಾ ಆರೋಗ್ಯಾಧಿಕಾರಿಯವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಆಸ್ಪತ್ರೆ ನಿರ್ಮಾಣ ಸಂಬಂಧ ಮಲಬಾರ್ ಅಭಿವೃದ್ಧಿ ವೇದಿಕೆಯನ್ನು ರಚಿಸಲಾಗಿತ್ತು, ದುರಂತಕ್ಕೀಡಾದ 184 ಪ್ರಯಾಣಿಕರ ಕುಟುಂಬಗಳು ಪಡೆದ ಪರಿಹಾರ ಮೊತ್ತದಿಂದ ಹಣವನ್ನು ಸಂಗ್ರಹಿಸಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಆಸ್ಪತ್ರೆಯಲ್ಲೇ ಮೆಡಿಕಲ್ ಮತ್ತು ಪ್ರಯೋಗಾಲಯಗಳನ್ನು ತೆರೆಯಲು ಕೂಡಾ ತೀರ್ಮಾನಿಸಲಾಗಿದೆ. ಈಗಾಗಲೇ 50 ಲಕ್ಷ ರೂಪಾಯಿ ಹಣ ಸಂಗ್ರಹಿಸಲಾಗಿದ್ದು, ತಮ್ಮ ತೀರ್ಮಾನದ ಕುರಿತಂತೆ ಮಾತನಾಡಿರುವ ಮಲಬಾರ್ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಅಬ್ಧುಲ್ ರೆಹಮಾನ್ ದುರಂತ ನಡೆದ ದಿನ 8ಕಿಮೀ ದೂರಕ್ಕೆ ಗಾಯಾಳುಗಳನ್ನು ಒಯ್ಯಬೇಕಾಯ್ತು. 300 ಮೀ ದೂರದಲ್ಲಿದ್ದ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳೇ ಇರಲಿಲ್ಲ. ಇಲ್ಲೊಂದು ಸುಸಜ್ಜಿತ ಆಸ್ಪತ್ರೆ ಇರುತ್ತಿದ್ರೆ ಇನ್ನಷ್ಟು ಜನರನ್ನು ಬದುಕಿಸಬಹುದಿತ್ತು. ಜೊತೆಗೆ ಆಸ್ಪತ್ರೆ ಇಲ್ಲದ ಕಾರಣ ಸ್ಥಳೀಯರು ಕೂಡಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲವನ್ನೂ ಮನಗಂಡು ಆಸ್ಪತ್ರೆ ಪ್ರಾರಂಭಿಸುತ್ತಿದ್ದೇವೆ ಅಂದಿದ್ದಾರೆ.
Discussion about this post