ಕಾರು ಖರೀದಿಗೆ ಬಂದ ಯುವ ರೈತನಿಗೆ ಅವಮಾನ ಮಾಡಿದ ಘಟನೆ ತುಮಕೂರಿನ ರಾಮನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಕೆಂಪೇಗೌಡ ಅನ್ನುವ ಯುವ ರೈತ ಬೊಲೆರೋ ಗಾಡಿ ಬುಕ್ ಮಾಡಲು ಬಂದಿದ್ದಾರೆ. ಈ ವೇಳೆ ರೈತನ ಸಾಮಾನ್ಯ ವೇಷ ಭೂಷಣ ನೋಡಿದ ಶೋ ರೂಮ್ ಮಂದಿ, ಇವನ್ಯಾರೋ ಬಡಪಾಯಿ ಎಂದು ಅವಮಾನಿಸಿದ್ದಾರೆ.
10 ರೂಪಾಯಿ ಹೊಂದಿಸಲು ಯೋಗ್ಯತೆ ಇಲ್ಲ, ಕಾರು ಖರೀದಿಸುತ್ತಾನಂತೆ ಎಂದು ಹಂಗಿಸಿದ್ದಾರೆ. ಇದರಿಂದ ಕೆರಳಿದ ರೈತ ಅರ್ಧ ಗಂಟೆಯಲ್ಲಿ 10 ಲಕ್ಷ ರೂಪಾಯಿ ಹೊಂದಿಸಿ ವಾಹನ ಡೆಲಿವರಿ ಕೊಡುವಂತೆ ಆಗ್ರಹಿಸಿದ್ದಾನೆ. ಇದರಿಂದ ಕಕ್ಕಾಬಿಕ್ಕಿಯಾದ ಮಂದಿ ಸಬೂಬು ಹೇಳಿ ರೈತನನ್ನು ಸಾಗ ಹಾಕಲು ಮುಂದಾಗಿದ್ದಾರೆ.
ಇದಾದ ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರ ನಡುವೆ ರಾಜಿ ಸಂಧಾನ ನಡೆಸಲಾಗಿದೆ. ಹಾಗೇ ನೋಡಿದರೆ ಪೊಲೀಸರು ರಾಜಿ ಸಂಧಾನ ನಡೆಸಿರುವುದೇ ತಪ್ಪು. ಬದಲಾಗಿ ದೇಶದ ಬೆನ್ನೆಲುಬು ಎಂದು ಕರೆಸಿಕೊಂಡ ಶೋ ರೂಮ್ ಮಾಲೀಕನ ವಿರುದ್ಧ ಕೇಸ್ ಜಡಿಯಬೇಕಾಗಿತ್ತು.
ರೈತರಿಗೆ ಹೀಗೆ ಅವಮಾನವಾಗುತ್ತಿರುವುದು ಮೊದಲೇನಲ್ಲ. ಅದ್ಯಾವ ಮಾಲ್, ಸ್ಟಾರ್ ಹೋಟೆಲ್, ಶ್ರೀಮಂತರು ಜೂಜಾಡುವ ಕ್ಲಬ್ ಗಳಿಗೆ ರೈತ ತನ್ನ ಅಸಲಿ ವೇಷದಲ್ಲಿ ಹೋದ್ರೆ ಅವಮಾನ ಮಾಡಿದ ಉದಾಹರಣೆಗಳು ಸಾಕಷ್ಚಿದೆ. ಹೀಗೆ ಅವಮಾನ ತಪ್ಪಬೇಕಾದ್ರೆ ಸ್ಟಾರ್ ಹೋಟೆಲ್, ಮಾಲ್ ಗಳಿಗೆ ರೈತರ ಉಡುಪಿನಲ್ಲೇ, ರೈತ ಪರ ಇರುವವರು ಕೂಡಾ ಹೋಗಬೇಕು. ಇದೊಂದು ಆಂದೋಲನನಾಗಬೇಕು.
Discussion about this post