ಕೇರಳ : ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳ ಶಬರಿಮಲೆ ಮತ್ತೆ ವಿವಾದದಲ್ಲಿದೆ. ಈ ಹಿಂದೆ ಮಹಿಳೆಯರ ಪ್ರವೇಶ ಕುರಿತಂತೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದ ಕ್ಷೇತ್ರದಲ್ಲಿ ಇದೀಗ ಹಲಾಲ್ ಬೆಲ್ಲದ ಬಗ್ಗೆ ಚರ್ಚೆ ನಡೆಯುತ್ತಿದೆ. ಅರವಣ ಪ್ರಸಾದ ಬಗ್ಗೆ ಸುಳ್ಳು ಸುದ್ದಿಗಳು ಪ್ರಸಾರಗೊಂಡ ಬೆನ್ನಲ್ಲೇ, ಹಲಾಲ್ ವಿಚಾರ ಕೋರ್ಟ್ ಮೆಟ್ಟಿಲೇರಿದೆ.
ಶಬರಿಮಲೆಯಲ್ಲಿ ತಯಾರಿಸಲಾಗುತ್ತಿರುವ ಪ್ರಸಾದಕ್ಕೆ ಹಲಾಲ್ ಸಂಪ್ರದಾಯದಲ್ಲಿ ಸಿದ್ದಗೊಂಡ ಬೆಲ್ಲ ಮತ್ತು ಹಾಳಾಗಿರುವ ಬೆಲ್ಲ ಬಳಸಲಾಗುತ್ತಿದೆ ಅನ್ನುವ ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ತಿರುವಾಂಕೂರು ದೇವಸ್ವಂ ಬೋರ್ಡ್ ತಿರಸ್ಕರಿಸಿದೆ.
ಹಾಗಿದ್ದರೂ ಹಲಾಲ್ ಬೆಲ್ಲದಿಂದ ತಯಾರಿಸಿದ ಅರವಣ ಪ್ರಸಾದ ಹಂಚಿಕೆಗೆ ನಿರ್ಬಂಧ ಹೇರಬೇಕು ಎಂದು ಶಬರಿಮಲೆ ಕರ್ಮ ಸಮಿತಿ ಸಂಯೋಜಕ ಎಸ್ ಜೆ ಆರ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಾಲಯ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಆದರೆ ಈ ಬಗ್ಗೆ ತಿರುವಾಂಕೂರು ದೇವಸ್ವಂ ಬೋರ್ಡ್ ಹೇಳುವುದೇ ಬೇರೆ. ಪ್ರಸಾದ ತಯಾರಿಕೆಗೆ ಮಹಾರಾಷ್ಟ್ರದಲ್ಲಿರುವ ಕಂಪನಿಯಿಂದ ಬೆಲ್ಲ ತರಿಸಿಕೊಳ್ಳಲಾಗುತ್ತದೆ. ಪಂಪಾದಲ್ಲಿರುವ ಲ್ಯಾಬ್ ನಲ್ಲಿ ಈ ಬೆಲ್ಲದ ಪರೀಕ್ಷೆ ನಡೆಯುತ್ತದೆ. ಅವರು ಬಳಕೆಗೆ ಯೋಗ್ಯ ಎಂದು ಹೇಳಿದ ನಂತರ ಅದನ್ನು ಪ್ರಸಾದಕ್ಕೆ ಬಳಸಲಾಗುತ್ತದೆ.
ಇನ್ನು 2019 ಮತ್ತು 2020ರಲ್ಲಿ ಬಂದಿದ್ದ ಬೆಲ್ಲವನ್ನು ಕೋವಿಡ್ ಕಾರಣದಿಂದ ಬಳಸಿಲ್ಲ. ಅದನ್ನು ಪಶು ಆಹಾರ ತಯಾರಿಸುವ ಕಂಪನಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಹಾಳಾಗಿರುವ ಬೆಲ್ಲ ಬಳಕೆಯ ಪ್ರಶ್ನೆ ಇಲ್ಲ. ಇನ್ನು 2020ರಲ್ಲಿ ಕೊಲ್ಲಿ ದೇಶವೊಂದಕ್ಕೆ ಕಳುಹಿಸಲು ಸಿದ್ದಪಡಿಸಿದ್ದ ಹಲಾಲ್ ಬೆಲ್ಲವನ್ನು ನಮಗೆ ಅಚಾತುರ್ಯವಾಗಿ ಕಳುಹಿಸಲಾಗಿತ್ತು. ಆದರೆ ಅದನ್ನು ನಾವು ಬಳಸಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಹಾಗಾದ್ರೆ ಶಬರಿಮಲೆ ಪ್ರತೀ ಸಲ ವಿವಾದಕ್ಕೆ ಗುರಿಯಾಗುವುದ್ಯಾಕೆ ಅನ್ನುವುದಕ್ಕೆ ಶಬರಿಮಲೆಯನ್ನು ನಂಬುವ ಮಂದಿ ಹೇಳುವುದೇ ಬೇರೆ. ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯಯನ್ನು ಹಾಳು ಮಾಡುವ ಪ್ರಯತ್ನ ಇದಾಗಿದ್ದು, ಉದ್ದೇಶ ಪೂರ್ವಕವಾಗಿ ವಿವಾದ ಹುಟ್ಟು ಹಾಕಲಾಗುತ್ತಿದೆ. ಈ ಮೂಲಕ ಶ್ರೀಕ್ಷೇತ್ರಕ್ಕೆ ಭಕ್ತರು ಬಾರದಂತೆ ಮಾಡುವ ಉದ್ದೇಶ ಇದರಲ್ಲಿ ಆಡಗಿದೆಯಂತೆ.
Discussion about this post