ಕನ್ನಡಿಗರ ಹೃದಯ ಗೆದ್ದ ರಾಜಕುಮಾರ, ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಗ್ಗೆ ಜಿಮ್ ಮಾಡುವಾಗ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಡಾ. ರಮಣ ರಾವ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಕ್ರಂ ಆಸ್ಪತ್ರೆಯ ವೈದ್ಯರ ಸತತ ಪರಿಶ್ರಮದ ಬಳಿಕವೂ ಅಪ್ಪು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಪುನೀತ್ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು ಸಂಪ್ರದಾಯ ಪ್ರಕಾರ ಅಂತಿಮ ವಿಧಿವಿಧಾನದ ಪೂಜೆಯನ್ನು ನೆರವೇರಿಸಿದ್ದಾರೆ.
ಜೊತೆ ಜೊತೆಗೆ ಪುನೀತ್ ರಾಜ್ಕುಮಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಸದಾಶಿವನಗರ ನಿವಾಸದಿಂದ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಅಮೆರಿಕದಲ್ಲಿರುವ ಪುತ್ರಿಯ ಆಗಮನಕ್ಕೆ ಕುಟುಂಬಸ್ಥರು ಕಾಯುತ್ತಿದ್ದು, ನಾಳೆ ಇಡೀ ದಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಇನ್ನು ಪುನೀತ್ ಅವರ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕು ಅನ್ನುವ ಪ್ರಶ್ನೆಗಳು ಎದ್ದಿದ್ದು, ಈ ಬಗ್ಗೆ ಕುಟುಂಬ ಸದಸ್ಯರು ಹಾಗೂ ಚಂದನವನದ ಹಿರಿಯರು ಚರ್ಚೆ ನಡೆಸಿದ್ದಾರೆ. ಈಗಿನ ಮಾಹಿತಿ ಪ್ರಕಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಸಬೇಕು ಅನ್ನುವ ಒತ್ತಾಯ ಕೇಳಿ ಬಂದಿದೆ. ಆದರೆ ಇದಕ್ಕೆ ಕೆಲವೊಂದು ಕಾನೂನು ಅಡ್ಡಿಗಳು ಕೂಡಾ ಇದೆ ಎನ್ನಲಾಗಿದೆ.
Discussion about this post