ಕೊಡಗು : ಕರಾವಳಿ ಹಾಗೂ ಮಡಿಕೇರಿ ಭಾಗದಲ್ಲಿ ಕೊರಗಜ್ಜನನ್ನು ತುಂಬಾ ನಂಬುತ್ತಾರೆ. ಸಂಕಷ್ಟ ಕಾಲದಲ್ಲಿ ಕೈ ಹಿಡಿಯುವ ದೈವದ ಬಗ್ಗೆ ಆಸ್ತಿಕರಿಗೆ ತುಂಬಾ ನಂಬಿಕೆ. ಅದರಲ್ಲೂ ಇತ್ತೀಚೆಗೆ ಕೊರಗಜ್ಜನ ವಿಚಾರದಲ್ಲಿ ಅನೇಕ ಪವಾಡಗಳು ಕೂಡಾ ನಡೆಯುತ್ತಿದೆ. ಅಷ್ಟೇ ಅಲ್ಲದೆ ತಪ್ಪಿ ನಡೆದ ಮಂದಿಗೆ ಎಚ್ಚರಿಕೆಯನ್ನೂ ನೀಡುತ್ತಾನೆ ಕೊರಗಜ್ಜ ಅನ್ನುವುದು ಭಕ್ತರ ನಂಬಿಕೆ.
ಹೀಗೆ ಕೊಡಗಿನ ಕುಶಾಲನಗರದ ಸುಂಟಿಕೊಪ್ಪದಲ್ಲಿ ಕೊರಗಜ್ಜನಿಗೆ ಹರಕೆ ರೂಪದಲ್ಲಿಟ್ಟ ಮದ್ಯವನ್ನು ಕದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿರುವ ಕೊರಗಜ್ಜ ಮತ್ತೆ ತನ್ನ ಪವಾಡ ತೋರಿದ್ದಾನೆ.
ಸುಂಟಿಕೊಪ್ಪದ ಕೆದಕಲ್ ನಲ್ಲಿ ಕೊರಗಜ್ಜನ ಗುಡಿಯೊಂದಿದ್ದು, ಇಲ್ಲಿಗೆ ಕಷ್ಟ ಎಂದು ಬಂದ ಭಕ್ತರಿಗೆ ನಿರಾಶೆಯಾಗಿಲ್ಲ. ಹೀಗಾಗಿ ಇದು ಕಾರ್ನಿಕದ ಕ್ಷೇತ್ರ ಎಂದು ಕರೆಸಿಕೊಂಡಿದೆ. ಹೀಗೆ ಈ ಕಾರ್ನಿಕದ ಕ್ಷೇತ್ರಕ್ಕೆ ಹರಕೆ ರೂಪದಲ್ಲಿ ಬಂದ ಮದ್ಯವನ್ನು ಕಳ್ಳನೊಬ್ಬ ಎಗರಿಸಿ, ಮತ್ತೆ ತಪ್ಪು ಕಾಣಿಕೆ ಸಲ್ಲಿಸಿದ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ದೈವಸ್ಥಾನದ ಬಳಿ ಬಂದ ವ್ಯಕ್ತಿಯೊಬ್ಬ ಯಾರು ಇಲ್ಲದಿರುವುದನ್ನು ಗಮನಿಸಿ ಎರಡು ಪ್ಯಾಕೆಟ್ ಮದ್ಯವನ್ನು ಎಗರಿಸಿದ್ದಾನೆ. ಅಚ್ಚರಿ ಅಂದ್ರೆ ಅಲ್ಲಿ ಸಾಕಷ್ಟು ಪ್ಯಾಕೆಟ್ ಮದ್ಯವಿತ್ತು. ಆದರೆ ತನಗೆ ಬೇಕಾದಷ್ಟು ಮಾತ್ರ ಕೊಂಡು ಹೋಗಿದ್ದಾನೆ.
ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಹೀಗಾಗಿ ಮದ್ಯ ಕದ್ದವನನ್ನು ನೀನೇ ನೋಡಿಕೋ ಎಂದು ಪ್ರಾರ್ಥಿಸಿದ್ದಾರೆ. ಇದರ ಬೆನ್ನಲ್ಲೇ ಮದ್ಯ ಕದ್ದವನ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ದೈವಸ್ಥಾನಕ್ಕೆ ಬಂದ ಆತ ತಪ್ಪು ಕಾಣಿಕೆ ಕಟ್ಟಿದ್ದಾನೆ.
Discussion about this post