ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಹೊರ ಬಂದಿರುವ ನಟಿ ಸಂಜನಾ ವಿವಾದಗಳಿಂದ ಹೊರ ಬರುವ ಲಕ್ಷಣಗಳಿಲ್ಲ. ಮೊನ್ನೆ ಮೊನ್ನೆ ಕ್ಯಾಬ್ ಡ್ರೈವರ್ ಜೊತೆ ಕಿರಿಕ್ ಮಾಡಿಕೊಂಡ ಗಂಡ ಹೆಂಡತಿ ಖ್ಯಾತಿಯ ಸಂಜನಾ, ಇದೀಗ ರಾಕಿ ಬ್ರದರ್ ವಿರುದ್ಧವೇ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಂಜನಾಗೂ ಮುಂಚೆ ಜೈಲು ಪಾಲಾಗಿದ್ದ ಆಪ್ತ ಸ್ನೇಹಿತ ರಾಹುಲ್ ಎಂಬಾತನ ವಿರುದ್ಧ ವಂಚನೆ ಆರೋಪ ಹೊರಿಸಿರುವ ಸಂಜನಾ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಸಂಜನಾ ದೂರು ಆಲಿಸಿದ ಬೆಂಗಳೂರಿನ 4ನೇ ACMM ನ್ಯಾಯಾಲಯ ತನಿಖೆ ನಡೆಸುವಂತೆ ಇಂದಿರಾ ನಗರ ಪೊಲೀಸರಿಗೆ ಸೂಚನೆ ನೀಡಿದೆ. ಈ ಸಂಬಂಧ ಇಂದಿರಾ ನಗರ ಠಾಣೆಯಲ್ಲಿ FIR ದಾಖಲಾಗಿದೆ.
ರಾಹುಲ್ ತನ್ನನ್ನು ಗೋವಾ ಕ್ಯಾಸಿನೋ ಎಂಡಿ ಎಂದು ಪರಿಚಯಿಸಿಕೊಂಡಿದ್ದ, ಇದಾದ ಬಳಿಕ ಕ್ಯಾಸಿನೋದಲ್ಲಿ ಹಣ ಹೂಡಿಕೆ ಮಾಡುವಂತೆ ನನಗೆ ಪ್ರೇರೇಪಿಸಿದ್ದ. ಹಣ ಹೂಡಿಕೆ ಮಾಡಿದರೆ ತುಂಬಾ ಲಾಭ ಮಾಡಬಹುದು ಎಂದು ಆಸೆ ತೋರಿಸಿದ್ದ. ಹೀಗಾಗಿ ನಾನು ಮೂವರ ಖಾತೆಗೆ ಮೂರು ವರ್ಷಗಳ ಹಿಂದೆ ಹಣ ಹಾಕಿದ್ದೆ. ಆದರೆ ಇದೀಗ ಲಾಭವೂ ಇಲ್ಲ ಅಸಲು ಇಲ್ಲ ಎಂದು ಸಂಜನಾ ದೂರಿದ್ದಾರೆ.
ಅಚ್ಚರಿ ಅಂದ್ರೆ ಇದೇ ರಾಹುಲ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂದರ್ಭದಲ್ಲಿ, ರಾಹುಲ್ ಪರ ಬ್ಯಾಟ್ ಬೀಸಿದ್ದ ಸಂಜನಾ ಆತನನ್ನು ಇಂದ್ರ ಚಂದ್ರ ಎಂದು ಹೊಗಳಿ ಅಟ್ಟಕೇರಿಸಿದ್ದರು.
Discussion about this post