ಇದು ಬರಿಯ ಹೊಟೇಲ್ ಅಲ್ಲ, ಅದು ಬೆಂಗಳೂರಿನ ಅಪ್ಪಟ ಕನ್ನಡ ಗಂಧವನ್ನು ಸಾರುವ ಪಾರಂಪರಿಕ ಸ್ಥಳ. ಅಲ್ಲಿಗೆ ಹೋದರೆ ಕೇವಲ ಹೊಟ್ಟೆ ತುಂಬುವುದು ಮಾತ್ರವಲ್ಲ ಸಾಂಸ್ಕೃತಿಕ ವಾತಾವರಣ ಸವಿಯಲೂ ಬಹುದು. ಇಲ್ಲಿರುವ ಸಾಹಿತಿಗಳ,ಕಲಾವಿದರ, ಕ್ರೀಡಾಪಟುಗಳ ಫೋಟೋ ನೋಡಿದ ಬಳಿಕ ಒಂದು ಅರ್ಥ ಮಾಡಿಕೊಳ್ಳಬೇಕು ಅವರೆಲ್ಲ ಇಲ್ಲಿಗೆ ಬರುತ್ತಿದ್ದರು ಅಂತಾ. ಅಂದ ಹಾಗೇ ಅದು ಬೇರಾವುದೇ ಜಾಗವಲ್ಲ ಅದುವೇ ವಿದ್ಯಾರ್ಥಿ ಭವನ.
ವಿದ್ಯಾರ್ಥಿ ಭವನದ ವಿಶೇಷ ಅಂದರೆ ಅಲ್ಲಿನ ಬೆಣ್ಣೆ ಹಾಕಿದ ಮಸಾಲೆ ದೋಸೆಯ ರುಚಿ. ಅದಕ್ಕೆ ಅದರದ್ದೇ ಆದ ಅನನ್ಯತೆ ಇದೆ. ಬೆಂಗಳೂರಿಗೆ ಬಂದ ಮೇಲೆ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿಯದಿದ್ರೆ ಬೆಂಗಳೂರು ಜೀವನ ಪರಿಪೂರ್ಣವಲ್ಲ.
ಹಾಗಂತ ಶುಕ್ರವಾರದ ದಿನ ದೋಸೆ ತಿನ್ಬೇಕು ಅಂತ ಗಾಂಧೀ ಬಜಾರ್ ಗೆ ಹೋದ್ರೆ ನಿಮಗೆ ನಿರಾಶೆ ಕಾದಿರುತ್ತದೆ. ಕಾರಣ ಅಲ್ಲಿ ಈ ದಿನ ರಜಾ ಬೋರ್ಡ್ ನೇತಾಡಿಕೊಂಡಿರುತ್ತದೆ. ಹಾಗಾದ್ರೆ ಪ್ರತೀ ಶುಕ್ರವಾರ ವಿದ್ಯಾರ್ಥಿ ಭವನಕ್ಕೆ ಯಾಕೆ ರಜೆ? ಇದಕ್ಕೊಂದು ಐತಿಹಾಸಿಕ ಹಿನ್ನೆಲೆ ಇದೆ.
1947 ಆಗಸ್ಟ್ 15ರಂದು ಭಾರತ ಸ್ವತಂತ್ರ ರಾಷ್ಟ್ರವಾದ ದಿನ ಶುಕ್ರವಾರ. ಅಂದಿನ ವಿದ್ಯಾರ್ಥಿ ಭವನದ ಮಾಲೀಕರಾದ ಸಾಲಿಗ್ರಾಮ ಪರಮೇಶ್ವರ ಉರಾಳರು ಎಂದಿಗಿಂತ ಮುಂಚೆಯೇ ಎದ್ದು ದಿನವಹಿ ತಯಾರಿಸುವ ಪ್ರಮಾಣಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಸಿಹಿತಿಂಡಿ ತಯಾರಿಸಿ, ವಿದ್ಯಾರ್ಥಿ ಭವನದ ಬಾಗಿಲು ತೆರೆದರು. ಹೊರಗೆ ಗಾಂಧಿಬಜಾರ್ ಚೌಕದಲ್ಲಿ ಇಡೀ ಬೆಂಗಳೂರು ಜನತೆ ಸೇರಿದಂತೆ ಕಂಡಿತು. ಮೂಲತಃ ಪರಮೇಶ್ವರ ಉರಾಳರು ರಾಷ್ಟ್ರಪ್ರೇಮಿ. ಸ್ವಾತಂತ್ರ್ಯ ಹೋರಾಟಕ್ಕೆ ವಿದ್ಯಾರ್ಥಿ ಭವನ ಕೂಡಾ ತನ್ನದೇ ರೀತಿಯಲ್ಲಿ ಸೇವೆ ಸಲ್ಲಿಸಿತ್ತು. ಉರಾಳರು ಅಡುಗೆ ಕೋಣೆಯಲ್ಲಿದ್ದ ಸಿಹಿ ತಿಂಡಿಗಳನ್ನೆಲ್ಲಾ ಭವನದ ಬಾಗಿಲಲ್ಲಿಟ್ಟರು.
ಮೊದಲ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮುಳುಗಿದ ಜನಸಂದಣಿಗೆ ಪರಮೇಶ್ವರ ಉರಾಳರ ಔದಾರ್ಯ ರಾಷ್ಟ್ರಪ್ರೇಮದ ಪ್ರತೀಕವಾಗಿ ಕಂಡಿತು. ಸಿಹಿ ಸಮಾರಾಧನೆ ಸಾಂಗೋಪಾಂಗವಾಯಿತು. ಇದೆಲ್ಲ ಆದ ಬಳಿಕ ಪರಮೇಶ್ವರ ಉರಾಳರಿಗೆ ಮಾಣಿಗಳಿಗೆಲ್ಲ ವಿಶ್ರಾಂತಿ ಕೊಡುವ ಮನಸ್ಸಾಯಿತು. ಜೊತೆ ಜೊತೆಗೆ ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಪ್ರತಿ ಶುಕ್ರವಾರವನ್ನು ವಾರದ ರಜೆ ದಿನವನ್ನಾಗಿ ಆಚರಿಸಬಾರದೇಕೆ ಎನಿಸಿತು.
ಅಂದಿನಿಂದ ಶುರುವಾದ ಶುಕ್ರವಾರದ ರಜೆ ಸಂಪ್ರದಾಯ ಇಂದಿಗೂ ಮುಂದುವರೆದಿದೆ.
ಆಧಾರ: ವಿದ್ಯಾರ್ಥಿ ಭವನದ 75ರ ಸಂದರ್ಭದಲ್ಲಿ (ರಾಮಕೃಷ್ಣ ಅಡಿಗರ ತಮ್ಮ) ಶ್ರೀಧರ ಅಡಿಗರ ಬರಹ. ಕೃಪೆ : ಫೇಸ್ ಬುಕ್
Discussion about this post