ನೆಲಗಡಲೆ ಜ್ಯೂಸ್ (ಶೇಂಗಾ ಜ್ಯೂಸ್)ಆರೋಗ್ಯಕ್ಕೂ ಉತ್ತಮ ಹಾಗೂ ದಿನವಿಡಿ ಸೇವಿಸುವ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕಾಂಶ ಕೇವಲ ಒಂದು ಜ್ಯೂಸ್ ನಲ್ಲಿ ಸಿಗುತ್ತದೆ. ಇತ್ತೀಚೆಗೆ ಸದ್ಗುರು ಅವರ ವೀಡಿಯೋವೊಂದನ್ನು ನೋಡುವಾಗ ಅದರಲ್ಲಿ ನೆಲಗಡಲೆ ಜ್ಯೂಸ್ ಮಾಡುವುದನ್ನು ನೋಡಿ ಟ್ರೈ ಮಾಡಿ ನೋಡಬೇಕು ಅನ್ನಿಸಿ ಮಾಡಿ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸಿತು.
ಬೆಳಗ್ಗೆಂದು ತಿಂಡಿ ತಿಂದು ಹೊರಡಲು ಸಮಯ ಸಾಕಾಗದೆ ಸ್ವಲ್ಪ ಲೇಟಾಗಿ ಮನೆಯಲ್ಲಿರುವವರು ಎದ್ದರೆ ಹೊಟ್ಟೆ ಖಾಲಿಯಿದ್ದಾಗ ಕೆಲಸ ಮಾಡಲಾಗದಂತಹ ಪರಿಸ್ಥಿತಿ ಹಲವರಿಗೆ ಕಾಡುತ್ತದೆ.ಅದರಲ್ಲೂ ಸೇಲ್ಸ್ ಹಾಗೂ ಕೌಂಟರ್ ಸೇಲ್ಸ್ ಮಾಡುವವರ ಮುಖದಲ್ಲಿ ಚೂರು ನಗುವಿಲ್ಲದೆ ಸಪ್ಪಗಿದ್ದರೆ ಹಾಗೂ ಮುಖ ಬಾಡಿದಂತೆ ಇದ್ದರೆ ಯಾರೂ ಅಷ್ಟಾಗಿ ಅವರನ್ನು ಗಮನಿಸುವುದಿಲ್ಲ ಕಷ್ಟವಿದ್ದರೂ ಒಳಗೆ ನೂರಾರು ನೋವಿದ್ದರೂ ಹೊರಜಗತ್ತು ನಗುಮುಖವನ್ನು ಮಾತ್ರ ಇಷ್ಟಪಡುತ್ತದೆ,ಎಂಬ ಸತ್ಯ ಹೊರಗಡೆ ಕೆಲಸ ಮಾಡುವವರಿಗೆ ಚೆನ್ನಾಗಿ ಗೊತ್ತು.ಮುಖದ ಕಳೆ fair & Lovely ಅಥವಾ ಬಳಸುವ ಸೋಪುಗಳಿಂದ ಹೆಚ್ಚುವುದಿಲ್ಲ ಸೇವಿಸುವ ಆಹಾರಗಳಿಂದ ಎಂಬುದು ಆಯುರ್ವೇದ ವೈದ್ಯರು ಹೇಳುವುದು.
ಬ್ಯಾಚುಲರ್ ಇದ್ದಾಗಂತೂ ತಿಂಡಿಯನ್ನೇ ಮರೆತುಬಿಡುವವರೂ ಇದ್ದಾರೆ.ಹೆಂಡತಿ ಅಥವಾ ಅಮ್ಮ ಮನೆಯಲ್ಲಿಲ್ಲದಿದ್ದರೆ ಅಡುಗೆ ಮನೆಗೆ ಹೋಗಲು ಉದಾಸೀನ ಮಾಡುವ ನನ್ನಂತವರಿಗೆ ಹತ್ತು ಗಂಟೆಯ ನಂತರ ದೇಹವೆಲ್ಲ ಸುಸ್ತಾಗಿ ಹಸಿವು ಮತ್ತು ದೇಹದ ಶಕ್ತಿ ಕ್ಷೀಣವಾಗಿ ಮಧ್ಯಾಹ್ನವಾಗುವುದನ್ನೇ ಕಾಯುವಂತಹ ಪರಿಸ್ಥಿತಿ.ಹೋಟೆಲ್ ಊಟ ದಿನವೂ ಮಾಡುವವರಿಗೆ ಸೋಡಾ ಅಥವಾ ಟೇಸ್ಟಿಂಗ್ ಪೌಡರ್ ಹಾಕಿದ ಆಹಾರ ರುಚಿಗಲ್ಲದೆ ದೇಹಕ್ಕೆ ಪುಷ್ಟಿ ನೀಡುವ ಯಾವುದೇ ಆಹಾರ ಸಿಗುವುದಿಲ್ಲ.
ನೆಲಗಡಲೆಯನ್ನು ರಾತ್ರಿ ನೆನೆಸಿಟ್ಟು ಅದಕ್ಕೆ ಒಳ್ಳೆ ಹಣ್ಣಾದ ಬಾಳೆಹಣ್ಣು ಹಾಗೂ ಒಂದೆರಡು ಸ್ಪೂನ್ ಶುದ್ದ ಜೇನುತುಪ್ಪ ಹಾಕಿ ಕುಡಿದರೆ ದೇಹದ ಶಕ್ತಿ ಕುಂದುವುದಿಲ್ಲ ಇದನ್ನು ಪ್ರಾಯೋಗಿಕವಾಗಿ ಮಾಡಿನೋಡಿದಾಗ ಹೌದು ಎಂದು ಮನವರಿಕೆಯಾದಾಗ ಬರೆದು ಹಂಚಿಕೊಂಡೆ.
ನೆಲಗಡಲೆ ರಾತ್ರಿ ನೆನೆಸಿದರೆ ಅದರ ಪಿತ್ತ ಉತ್ಪಾದನಾ ಆಂಶ ಕಡಿಮೆಯಾಗುತ್ತದೆ.ಬಡವರ ಬಾದಾಮಿ ಶೇಂಗಾ ಎಂದು ಉತ್ತರ ಕರ್ನಾಟಕದಲ್ಲಿ ಪ್ರಾಶಸ್ತ್ಯ ಹೊಂದಿರುವ ನೆಲಗಡಲೆ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ಕೈಕಾಲು ಸುಸ್ತುನಿಶ್ಯಕ್ತಿಹೊಂದುವುದನ್ನು ತಡೆಗಟ್ಟುತ್ತದೆ.ಬಾಳೆಹಣ್ಣಿನಲ್ಲಿಯೂ ಉತ್ತಮ ಪೋಶಕಾಂಶಗಳಿದ್ದು ಉತ್ತಮ ಪಚನಕ್ರಿಯೆ ಹೊಂದುವಂತೆ ಮಾಡುತ್ತದೆ.ಜೇನು ತುಪ್ಪ ದೇಹದಲ್ಲಿ ಕಫ ಉತ್ಪಾದನೆಯ ಪ್ರಮಾಣವನ್ನು ಕಡಿಮೆಮಾಡಿ ದೇಹದ ಆಲಸ್ಯವನ್ನು ನಿವಾರಿಸುತ್ತದೆ.
ಸುಲಭವಾಗಿ ಮಾಡಬಹುದಾದ ನೆಲಗಡಲೆ ಜ್ಯೂಸ್..
ರಾತ್ರಿ ಒಂದು ಹಿಡಿಯಷ್ಟು ನೆಲಗಡಲೆಯನ್ನು ನೆನೆಸಿಟ್ಟು ಬೆಳಗ್ಗೆ ಅದಕ್ಕೆ ಹಣ್ಣಾಗಿರುವ ಬಾಳೆಹಣ್ಣು ಯಾವುದೇ ತಳಿಯಾದರೂ ಸರಿ ಅದನ್ನು ಚಿಕ್ಕದಾಗಿ ಹಚ್ಚಿಕೊಂಡು ಮಿಕ್ಸಿಯಲ್ಲಿ ಮಾಮಾಲಿ ಜ್ಯೂಸ್ ನಂತೆ ನೀರು ಅಥವಾ ಹಾಲು ಬೇಕಾದರೂ ಸ್ವಲ್ಪ ಸೇರಿಸಿ ಅದಕ್ಕೆ ಜೇನುತುಪ್ಪ ಹಾಕಿ ಬೆರೆಸಿ ಕುಡಿದುನೋಡಿ.ಬೇರೇನೂ ತಿಂಡಿ ಸೇವಿಸದಿದ್ದರೂ ಕನಿಷ್ಟ ಐದಾರು ಗಂಟೆಗಳ ಕಾಲ ದೇಹ ಹಸಿವಿನಿಂದ ಬಳಲದೇ ಬೆಳಗ್ಗೆ ಏಳುವಾಗ ಇರುವಾಗ ಇರುವ ಉತ್ಸಾಹ ದೇಹದಲ್ಲಿರುತ್ತದೆ.
ಸತತ ದಿನಾ ಬೆಳಗ್ಗೆ ಮಾಡಿ ಕುಡಿಯುವವರಿಗೆ ಮಧ್ಯಾಹ್ನದವರೆಗೆ ಬೇರೆ ಆಹಾರದ ಅಗತ್ಯವೂ ಇರುವುದಿಲ್ಲ.ನಿಮ್ಮ ಮುಖ ಕಳೆಗುಂದದೇ ದೇಹವೂ ಪುನಶ್ಚೇತನ ಹೊಂದುತ್ತಿರುತ್ತದೆ. ಹೊಟ್ಟೆತುಂಬಲು ಬಹಳ ಆಹಾರವಿದ್ದರೂ ದೇಹಕ್ಕೆ ಪೌಷ್ಟಿಕಾಹಾರದ ಕೊರತೆ ಕಾಡುವವರಿಗಿದು ಉತ್ತಮ. ಮಕ್ಕಳಿಗೂ ಎಲ್ಲಾ ಪ್ರಾಯದವರಿಗೂ ಸೇವಿಸಬಹುದು.
ಬರಹ : ದಯಾ ಆಕಾಶ್ ಕಾಸರಗೋಡು
Discussion about this post