ನವದೆಹಲಿ : ಭಾರತದ ಮೇಲೆ ಸದಾ ಕೆಂಡ ಕಾರುತ್ತಿರುವ, ಉಗ್ರರನ್ನು ಘೋಷಿಸಿ ಭಾರತಕ್ಕೆ ರಫ್ತು ಮಾಡುತ್ತಿರುವ ಪಾಕಿಸ್ತಾನ ಇದೀಗ ದಯನೀಯ ಸ್ಥಿತಿ ತಲುಪಿದೆ. ಕೆಲವರ ಬಾಯಲ್ಲಿ ಸ್ವರ್ಗ ಎಂದು ಕರೆಸಿಕೊಂಡಿರುವ ಪಾಕಿಸ್ತಾನ ನರಕವಾಗುತ್ತಿದೆ. ಇಮ್ರಾನ್ ಖಾನ್ ಪ್ರಧಾನಿಯಾಗುತ್ತಿದ್ದಂತೆ ದೇಶದ ಬೊಕ್ಕಸ ಬರಿದಾಗಿತ್ತು. ಹೀಗಾಗಿ ಕತ್ತೆ, ಎಮ್ಮೆ ಮಾರಾಟ ಮಾಡಿ ಬೊಕ್ಕಸ ತುಂಬುವ ಪ್ರಯತ್ನ ನಡೆದಿತ್ತು.
ಇದೀಗ ಪ್ರಧಾನಿಯವರ ನಿವಾಸವನ್ನೇ ಬಾಡಿಗೆಗೆ ಕೊಡಲು ನಿರ್ಧರಿಸಲಾಗಿದೆ. ಈ ಮೂಲಕ ಕಾಸು ಹೊಂದಿಸುವ ಪ್ರಯತ್ನ ನಡೆಯುತ್ತಿದೆ. ಹಾಗಂತ ಪ್ರಧಾನಿ ನಿವಾಸದಿಂದ ಆದಾಯ ಸಂಪಾದನೆ ಪ್ರಯತ್ನ ಇದು ಮೊದಲೇನಲ್ಲ. ಪ್ರಧಾನಿ ನಿವಾಸದ ವೆಚ್ಚ ವಾರ್ಷಿಕ 47 ಕೋಟಿ ಅನ್ನುವ ಕಾರಣಕ್ಕೆ ಇಮ್ರಾನ್ 2018ರಲ್ಲೇ ಬಂಗಲೆ ತೊರೆದಿದ್ದರು. ಇದಾದ ಬಳಿಕ ಪಿಟಿಐ ಪಕ್ಷ ಈ ಕಚೇರಿಯನ್ನು ಸ್ನಾತಕೋತ್ತರ ಇನ್ ಸ್ಟಿಟ್ಯೂಟ್ ಕ್ಯಾಂಪಸ್ ಆಗಿ ಪರಿವರ್ತಿಸಿತ್ತು. ಆದರೆ ಪಿಟಿಐ ಪಕ್ಷದಲ್ಲೇ ಕಾಸಿರಲಿಲ್ಲ.
ಬಳಿಕ 2019ರಲ್ಲಿ ಮದುವೆ ಸೇರಿ ಇತರ ಸಮಾರಂಭಗಳಿಗೆ ಹಾಲ್ ಆಗಿ ಪರಿವರ್ತಿಸಿ ಪ್ರಧಾನಿ ನಿವಾಸವನ್ನು ಕೊಡಲಾಗಿತ್ತು. ಕೊರೋನಾ ಕಾರಣದಿಂದ ಮದುವೆಗಳು ಕೂಡಾ ನಡೆಯುತ್ತಿಲ್ಲ. ಹೀಗಾಗಿ ಇದೀಗ ಪೂರ್ತಿ ನಿವಾಸವನ್ನು ಬಾಡಿಗೆಗೆ ಕೊಡಲು ನಿರ್ಧರಿಸಲಾಗಿದೆ.
ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ಈ ಸಂಬಂಧ ಆದೇಶ ಹೊರಡಿಸಿದೆ.
Discussion about this post