ಮಂಗಳೂರು : ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಜುಲೈ 15 ರಂದು ಪ್ರಧಾನಿ ನರೇಂದ್ರ ಮೋದಿ ರುದ್ರಾಕ್ಷ ಅಂತರರಾಷ್ಟ್ರೀಯ ಸಭಾಂಗಣವನ್ನು ಉದ್ಘಾಟಿಸಿದ್ದರು. ಈ ವೇಳೆ ಸಭಾಂಗಣಕ್ಕೆ ಮಾಡಿದ ಲೈಟಿಂಗ್ ವ್ಯವಸ್ಥೆ ಎಲ್ಲರ ಕಣ್ಮನ ಸೆಳೆದಿತ್ತು.
ಜಪಾನ್ ತಂತ್ರಜ್ಞಾನದಡಿಯಲ್ಲಿ ನಿರ್ಮಾಣವಾಗಿರುವ ಸಭಾಂಗಣವಾಗಿರುವ ಕಾರಣ, ಜಪಾನ್ ಸಂಸ್ಥೆಯೇ ಲೈಟಿಂಗ್ ಮಾಡಿರಬೇಕು ಅನ್ನುವುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಇದೀಗ ಅಚ್ಚರಿಯ ವಿಷಯವೊಂದು ಹೊರ ಬಿದ್ದಿದ್ದು, ಅಂತರರಾಷ್ಟ್ರೀಯ ಸಭಾಂಗಣದ ಸ್ಟೇಜ್ ಲೈಟಿಂಗ್ ಹಾಗೂ ಹೊಸ ತಂತ್ರಜ್ಞಾನದ ವಿನ್ಯಾಸ ಮತ್ತು ಅದನ್ನು ಅಳವಡಿಕೆ ಮಾಡಿದ್ದು ಕರಾವಳಿಯ ಕನ್ನಡಿಗರು ಎಂದು ಗೊತ್ತಾಗಿದೆ.
ಮಂಗಳೂರಿನ ಕೆನರಾ ಲೈಟಿಂಗ್ಸ್ ಸಂಸ್ಥೆ ಈ ಕಾರ್ಯವನ್ನು ನಿರ್ವಹಿಸಿದ್ದು, 10 ಕೋಟಿ ವೆಚ್ಚದಲ್ಲಿ ಲೈಟಿಂಗ್ ಅನ್ನು ಮಾಡಲಾಗಿತ್ತು. ಎಲ್ಲವೂ ಜಪಾನಿ ಕಂಪನಿ ಅಡಿಯಲ್ಲೇ ನಡೆದಿದ್ದು, ( canara lighting ) ಕೆನರಾ ಲೈಟಿಂಗ್ಸ್ ನ 150 ಹಾಗೂ ಹೊರಗಿನ 5 ಮಂದಿ ಈ ಕೆಲಸವನ್ನು ಪೂರೈಸಿದ್ದಾರೆ.
ಜಪಾನ್ ಮಾದರಿ ಲೈಟಿಂಗ್, ಯಂತ್ರೋಪಕರಣ, ಪರದೆ ವ್ಯವಸ್ಥೆಯನ್ನು ಕೆನರಾ ಲೈಟಿಂಗ್ ಕಂಪನಿ ತನ್ನ ವಿಶ್ವದರ್ಜೆಯ ಉತ್ಪಾದನಾ ಘಟಕದಲ್ಲಿ ತಯಾರಿಸಿದೆ. ಇದಕ್ಕಾಗಿ ಪರಿಸರ ಸ್ನೇಹಿ, ವಿದ್ಯುತ್ ದಕ್ಷತೆಯ LEDಗಳನ್ನು ಅಳವಡಿಸಲಾಗಿತ್ತು.
ಇನ್ನು ಈ ಕಾರ್ಯದ ಕುರಿತಂತೆ ಮಾತನಾಡಿರುವ ಕೆನರಾ ಲೈಟಿಂಗ್ಸ್ ನ ಮುಖ್ಯಸ್ಥ ಅಜಿತ್ ಖರೆ, ನಮ್ಮ ಎಲ್ಲಾ ಉತ್ಪನ್ನಗಳನ್ನು ತಜ್ಞರು ಪರಿಶೀಲನೆ ನಡೆಸಿದ ಬಳಿಕವೇ ಸಭಾಂಗಣಕ್ಕೆ ಅಳವಡಿಸಲಾಗಿದೆ ಅಂದಿದ್ದಾರೆ.
Discussion about this post