ಕೊರೋನಾ ಕಾರಣದಿಂದ ಬಹುತೇಕ ಉದ್ಯಮಗಳು ನೆಲ ಕಚ್ಚಿದೆ. ಅದರಲ್ಲಿ ಮಾಧ್ಯಮಗಳು ಕೂಡಾ ಹೊರತಾಗಿಲ್ಲ. ಇರುವುದರಲ್ಲಿ ಮನೋರಂಜನಾ ವಾಹಿನಿಗಳು ಕೊರೋನಾ ಕಾಲದಲ್ಲೂ ಭರ್ಜರಿ ಲಾಭ ಮಾಡಿಕೊಳ್ಳುತ್ತಿವೆ ಬಿಟ್ಟರೆ, ನ್ಯೂಸ್ ಚಾನೆಲ್ ಗಳು ನಷ್ಟದಲ್ಲಿದೆ. ಅದರಲ್ಲೂ ಕನ್ನಡ ಸೇರಿದಂತೆ ಪ್ರಾದೇಶಿಕ ಸುದ್ದಿ ವಾಹಿನಿಗಳು ಸಂಕಷ್ಟದಲ್ಲಿದೆ.
ಊರವರ ಸಂಕಷ್ಟದ ಬಗ್ಗೆ ಸುದ್ದಿ ಮಾಡೋ ಮಂದಿಯ ಸಂಕಷ್ಟ ಯಾರ ಕಿವಿಗೂ ಬೀಳದಾಗಿದೆ. ಕನ್ನಡ ಸುದ್ದಿವಾಹಿನಿಗಳ ಮಟ್ಟಿಗೆ ನೋಡುವುದಾದರೆ ಅದೆಷ್ಟೋ ವಾಹಿನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ಕೊಡಲು ಪರದಾಡುತ್ತಿದೆ. ಇದೇ ಕಾರಣಕ್ಕಾಗಿ ಕೆಲ ಚಾನೆಲ್ ಗಳು ಬಾಗಿಲು ಹಾಕಿದೆ ಕೂಡಾ. ಅವರಿಗೆ ಸಂಬಳವಾಗಿಲ್ಲ, ಇವರಿಗೆ ಸಂಬಳವಾಗಿಲ್ಲ ಎಂದು ಸುದ್ದಿ ಮಾಡೋ ಮಂದಿ ಸ್ಯಾಲರಿ ಮುಖ ನೋಡದೆ ಎರಡು ತಿಂಗಳು ಕಳೆದಿರುತ್ತದೆ. ಸಂಬಳಕ್ಕಾಗಿ ಪ್ರತಿಭಟನೆ ಮಾಡಿದರೆ ಕೆಲಸ ಕಳೆದುಕೊಳ್ಳುವ ಭೀತಿ.
ಈ ನಡುವೆ ಜಾಂಬಿಯಾ ದೇಶದ ಟಿವಿ ವಾಹಿನಿಯೊಂದರ ಸುದ್ದಿ ವಾಚಕನೊಬ್ಬ ನೇರ ಪ್ರಸಾರದ ಸಂದರ್ಭದಲ್ಲೇ ವೇತನ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಕೆಬಿಎನ್ ಹೆಸರಿನ ಸುದ್ದಿ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಬುಲೆಟಿನ್ ಹೆಡ್ ಲೈನ್ ಓದಿದ ಬಳಿಕ, ಸಂಸ್ಥೆ ನಮಗೆ ಸಂಬಳ ನೀಡಿಲ್ಲ, ನಾವು ಮನುಷ್ಯರು, ನಾವೆಲ್ಲಾ ಕಷ್ಟದಲ್ಲಿದ್ದೇವೆ. ಮಾನವೀಯ ನೆಲೆಯಲ್ಲಿ ನಮಗೆ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾನೆ.
ಆದರೆ ಸಂಸ್ಥೆ ಇದನ್ನು ನಿರಾಕರಿಸಿದ್ದು, ಕುಡಿದ ಮತ್ತಿನಲ್ಲಿ ಹೀಗೆಲ್ಲಾ ಆಡಿದ್ದಾನೆ ಎಂದು ದೂರಿದೆ.
Discussion about this post