ವೈದ್ಯೋ ನಾರಾಯಣೋ ಹರಿ ಅನ್ನು ಮಾತಿದೆ. ಆದರೆ ಈಗಿನ ಕೊರೋನಾ ಸ್ಥಿತಿಯಲ್ಲಿ ವೈದ್ಯಕೀಯ ಲೋಕದ ಕೆಲ ಮಂದಿ ವರ್ತಿಸಿದ ರೀತಿ ಇಡೀ ನಾಡು ತಲೆ ತಗ್ಗಿಸುವಂತೆ ಮಾಡಿದೆ. ಅದರಲ್ಲೂ ಕೆಲ ಖಾಸಗಿ ಆಸ್ಪತ್ರೆಗಳ ಧನದಾಹಿ ವರ್ತನೆ ನಿಜಕ್ಕೂ ಅಸಹ್ಯ ಮೂಡಿಸುವಂತಿದೆ.
ಈ ನಡುವೆ ವೈದ್ಯಕೀಯ ಲೋಕಕ್ಕೆ ಮಸಿ ಬಳಿದವರ ನಡುವೆಯೂ ಒಳ್ಳೆಯ ವೈದ್ಯರು ಈ ನಾಡಿನಲ್ಲಿದ್ದಾರೆ. ದೇವರ ಸ್ವರೂಪಿಗಳು ಅನ್ನುವಂತೆ ರೋಗಿಗಳ ಸೇವೆ ಮಾಡುತ್ತಿರುವ ಇವರನ್ನು ಯಾರೂ ಕೂಡಾ ಮರೆಯುವಂತಿಲ್ಲ. ಕಾಸಿನಾಸೆ ಬೀಳದ ಇಂತಹ ವೈದ್ಯರು ಜನರ ಆರೋಗ್ಯ ಕಾಪಾಡುವುದೇ ನಮ್ಮ ಧ್ಯೇಯ ಅನ್ನುವಂತೆ ಕೆಲಸ ಮಾಡುತ್ತಿದ್ದಾರೆ. ಕಾಸಿಲ್ಲದೆ ಬಂದವರಿಗೂ ಇವರು ಚಿಕಿತ್ಸೆ ನಿರಾಕರಿಸುವುದಿಲ್ಲ.
ಇಂತಹ ಅನೇಕ ವೈದ್ಯರು ಕರಾವಳಿಯದಲ್ಲಿದ್ದು, ಇವತ್ತು ಬೆಳ್ತಂಗಡಿಯ ವೈದ್ಯರೊಬ್ಬರನ್ನು ಪರಿಚಯಿಸುತ್ತಿದ್ದೇವೆ.
ಇವರ ಹೆಸರು ಡಾ.ಕಿಶೋರ್ ಕುಮಾರ್ ಅಡ್ಯಂತಾಯ. ಬೆಳ್ತಂಗಡಿಯ ಮಡಂತ್ಯಾರು ಅನ್ನೋ ಪುಟ್ಟ ಊರಿನಲ್ಲಿ ಆರ್ಯುವೇದ ಕ್ಲಿನಿಕ್ ನಡೆಸುತ್ತಿದ್ದಾರೆ. 35 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿರುವ ಇವರಲ್ಲಿಗೆ ಮಡಂತ್ಯಾರು ಮಾತ್ರವಲ್ಲದೆ ಸುತ್ತ ಮುತ್ತಲಿನ ಊರಿನಿಂದಲೂ ಜನ ಬರುತ್ತಾರೆ. ಅದ್ಯಾವ ಕಾಯಿಲೆ ಸಲುವಾಗಿ ಜನ ಬರಲಿ ಬಂದವರಿಂದ ಕೇವಲ 5 ರೂಪಾಯಿ ಫೀಸು ಪಡೆಯುತ್ತಾರೆ. ಇವರ ಕೈ ಗುಣ ಅದೆಷ್ಟು ಚೆನ್ನಾಗಿದೆ ಅಂದ್ರೆ ದೂರದ ಚಾರ್ಮಾಡಿಯಿಂದಲೂ ಜನ ಆಗಮಿಸುತ್ತಾರೆ.
ಇನ್ನು ಇವರ ಕಾರ್ಯದ ಬಗ್ಗೆ ಇವರನ್ನು ಮಾತನಾಡಿಸಲು ಪ್ರಯತ್ನಿಸಿದ್ರೆ, ಮಾತನಾಡಲು ಇವರು ಸಿದ್ದರಿಲ್ಲ. ಹಾಗೆಲ್ಲಾ ಮಾಧ್ಯಮಗಳಿಗೆ ಮಾತನಾಡಿದ್ರೆ ನನ್ನ ಸೇವೆಯನ್ನು ನಾನು ಪ್ರಚಾರಕ್ಕೆ ಬಳಸಿದಂತಾಗುತ್ತದೆ. ಜನರ ಸೇವೆ ನನಗೆ ಮುಖ್ಯ ಹೊರತು, ಪ್ರಚಾರವಲ್ಲ ಅಂದಿದ್ದಾರೆ.
ನಿಮ್ಮೂರಿನಲ್ಲೂ ಇದೇ ರೀತಿ ವೈದ್ಯರು ಇರಬಹುದು. ಒಂದು ವೇಳೆ ಕಾಸಿನ ಮುಖ ನೋಡದೆ ಚಿಕಿತ್ಸೆ ನೀಡುವ ವೈದ್ಯರು ನಿಮ್ಮೂರಿನಲ್ಲಿ ಇದ್ದಲ್ಲಿ 8050149691 ( ವಾಟ್ಸಾಪ್ ಮಾತ್ರ) ತಿಳಿಸಿಕೊಡಿ.
Discussion about this post