ಚೆನೈ : ದೇಶದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ಅಬ್ಬರಿಸಲು ಚುನಾವಣಾ ಆಯೋಗದ ನಿರ್ಧಾರಗಳೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ನೇರವಾಗಿ ಆರೋಪಿಸಿದೆ. ಮಾತ್ರವಲ್ಲದೆ ಇಂತಹ ನಿರ್ಲಕ್ಷ್ಯ ಧೋರಣೆ ತಳೆದಿರುವ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್ ದಾಖಲಿಸಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ತಮಿಳುನಾಡಿನ ಕರೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿಚಾರ ಕುರಿತಂತೆ ಅಣ್ಣಾಡಿಎಂಕೆ ಪಕ್ಷದ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ವೇಳೆ ಈ ವಿಷಯಗಳು ಪ್ರಸ್ತಾಪಗೊಂಡಿದೆ.
ನ್ಯಾಯಾಧೀಶರು ಚುನಾವಣಾ ಆಯೋಗದ ವಿರುದ್ಧ ಗರಂ ಆಗಿ ಚಾಟಿ ಬೀಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಚುನಾವಣಾ ಆಯೋಗದ ಪರ ವಕೀಲರು, ಕೊರೋನಾ ಹರಡದಂತೆ ಕ್ರಮ ಕೈಗೊಂಡಿದ್ದೇವೆ ಎಂದು ನ್ಯಾಯಾಧೀಶರ ಮನವೊಲಿಸಲು ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ನ್ಯಾಯಾಧೀಶರು,ಚುನಾವಣಾ ಸಭೆಗಳು ನಡೆಯುತ್ತಿದ್ದ ವೇಳೆ ನೀವೆಲ್ಲಿ ಇದ್ರಿ, ಅನ್ಯಗ್ರಹಕ್ಕೆ ಹೋಗಿದ್ರ, ಈ ಬಹಿರಂಗ ಸಭೆಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ಕೊಟ್ಟ ಕಾರಣದಿಂದಲೇ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದೆ.
ಸಾರ್ವಜನಿಕ ಆರೋಗ್ಯ ಅನ್ನುವುದು ಅತ್ಯಂತ ಮಹತ್ವದ ವಿಚಾರ. ಆದರೆ ಸಾಂವಿಧಾನಿಕ ಸಂಸ್ಥೆಗಳಿಗೆ ಅದನ್ನು ನೆನಪಿಸಬೇಕಾಗಿ ಬಂದಿರುವುದು ದುರಂತು ಎಂದು ಖೇದ ವ್ಯಕ್ತಪಡಿಸಿದ ನ್ಯಾಯಾಲಯ ನಾಗರಿಕ ಬದುಕಿ ಉಳಿದರೆ ಮಾತ್ರ ಅತ ಹಕ್ಕುಗಳನ್ನು ಅನುಭವಿಸಲು ಸಾಧ್ಯ. ಈಗ ಬದುಕುಳಿದರೆ ಸಾಕು ಅನ್ನುವ ಪರಿಸ್ಥಿತಿ ಇದೆ. ಹೀಗಾಗಿ ಮತ ಎಣಿಕೆ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮತ ಎಣಿಕೆಯನ್ನೇ ತಡೆ ಹಿಡಿಯಬೇಕಾಗುತ್ತದೆ ಎಂದು ಗುಡುಗಿದೆ.
ತಮಿಳುನಾಡಿನ ಕರೂರು ವಿಧಾನಸಭಾ ಕ್ಷೇತ್ರದಲ್ಲಿ 77 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆ ಪರ ಎಜೆಂಟ್ ಗಳು, ಮತ ಎಣಿಕೆ ಸಿಬ್ಬಂದಿ, ಮೇಲ್ವಿಚಾರಕರು ಸೇರಿದರೆ ಮತ ಎಣಿಕೆ ಕೊಠಡಿಯಲ್ಲಿ ಸ್ಥಳಾವಕಾಶ ಕಲ್ಪಿಸುವುದು ಕಷ್ಟ. ಹೀಗಾಗಿ ಸೂಕ್ತ ಕೋವಿಡ್ ಕ್ರಮಗಳನ್ನು ಕೈಗೊಳ್ಳುವಂತೆ ಆಯೋಗಕ್ಕೆ ಸೂಚಿಸಿ ಎಂದು ಅಣ್ಣಾಡಿಎಂಕೆ ಅಭ್ಯರ್ಥಿ ಎಂ.ಆರ್. ವಿಜಯ ಭಾಸ್ಕರ್ ಕೋರ್ಟ್ ಮೆಟ್ಟಿಲೇರಿದ್ದರು.
Discussion about this post