ಕೇರಳ : ದೇವರನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ತ್ರಿಶೂರ್ ಪೂರಂ ಅನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸುವುದಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಹೇಳಿದ್ದಾರೆ.
ಕೇರಳದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ತ್ರಿಶೂರ್ ಪೂರಂ ಅನ್ನು ರದ್ದುಗೊಳಿಸಬೇಕು ಅನ್ನುವ ಆಗ್ರಹ ಕೇಳಿ ಬಂದಿತ್ತು.. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವೆ, ಈ ಹಿಂದೆ ಕೊರೋನಾ ಸೋಂಕಿನ ಅಬ್ಬರ ಕಡಿಮೆ ಇದ್ದ ಸಂದರ್ಭದಲ್ಲಿ ಪೂರಂಗೆ ಅನುಮತಿ ನೀಡಲಾಗಿತ್ತು. ಹಬ್ಬಕ್ಕಾಗಿ ಈಗಾಗಲೇ ಸಕಲ ಸಿದ್ದತೆಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪೂರಂ ಅನ್ನು ರದ್ದುಗೊಳಿಸುವುದು ಅಸಾಧ್ಯ.
ಆದರೂ ಇದೀಗ ಸೋಂಕಿನ ಸಂಖ್ಯೆ ಏರುತ್ತಿರುವ ಹಿನ್ನಲೆಯಲ್ಲಿ ಪೂರಂಗೆ ಬರುವವರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಗಳನ್ನು ತರಬೇಕು, ಅಥವಾ ಅವರು ಕೊರೋನಾ ಲಸಿಕೆಯನ್ನು ಪಡೆದಿರಬೇಕು. ಅಂತವರಿಗೆ ಮಾತ್ರ ಪೂರಂ ಸಂಭ್ರಮಕ್ಕೆ ಪ್ರವೇಶ ನೀಡುವುದಾಗಿ ಸಚಿವೆ ಹೇಳಿದ್ದಾರೆ.
ಇದೇ ವೇಳೆ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮೊದಲ ಅಲೆಯಿಂದ ರಾಜ್ಯ ಸಾಕಷ್ಟು ಕಲಿತಿದೆ. ಹೀಗಾಗಿ ಸೋಂಕಿತರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎ ಕೆಟಗರಿಯಲ್ಲಿ ಬರುವವರನ್ನು Asymptomatic ಎಂದು ಗುರುತಿಸಲಾಗಿದೆ. ಇವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ಸೂಚಿಸಲಾಗುತ್ತಿದೆ. ಒಂದು ವೇಳೆ Asymptomatic ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಕೊಠಡಿ ಮತ್ತು ಟಾಯ್ಲೆಟ್ ಗಳು ಇಲ್ಲದಿದ್ದರೆ ಸ್ಥಳೀಯಾಡಳಿತ ವತಿಯಿಂದ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುತ್ತದೆ.
ಕಡಿಮೆ ಸೋಂಕಿನ ಲಕ್ಷಣ ಹೊಂದಿದವರನ್ನು ಬಿ ಕೆಟಗರಿಯಲ್ಲಿ ಗುರುತಿಸಲಾಗುತ್ತದೆ. ಇಂತವರನ್ನು ಜಿಲ್ಲಾ ಮಟ್ಟದಲ್ಲಿರುವ ಕೊರೋನಾ ಎರಡನೇ ಹಂತದ ಚಿಕಿತ್ಸಾ ಕೇಂದ್ರಗಳಿಗೆ ಆಡ್ಮಿಶನ್ ಮಾಡಿಕೊಳ್ಳಲಾಗುತ್ತದೆ.
ಸೋಂಕಿನ ತೀವ್ರ ಲಕ್ಷಣ ಹೊಂದಿದವರನ್ನು ಸಿ ಕೆಟಗರಿಯಲ್ಲಿ ಸೇರಿಸಲಾಗುತ್ತದೆ. ಇವರನ್ನು ನೇರವಾಗಿ ಸರ್ಕಾರಿ ಆಸ್ರತ್ರೆ ಸೇರಿಸಲಾಗುತ್ತದೆ. ಅದೃಷ್ಟ ಅಂದ್ರೆ ಸಿ ಕೆಟಗರಿಯ ಸೋಂಕಿತರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಆರೋಗ್ಯ ಸಚಿವರು ಕೇರಳಕ್ಕೆ ನೆಮ್ಮದಿಯ ಸುದ್ದಿ ಕೊಟ್ಟಿದ್ದಾರೆ.
ಇನ್ನು ಕೇರಳದಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿಲ್ಲ, ಮುಂದಿನ ದಿನಗಳಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾದರೂ ಅದನ್ನು ಸರಬರಾಜು ಮಾಡುವ ಸಾಮರ್ಥ್ಯ ರಾಜ್ಯಕ್ಕೆ ಇದೆ ಎಂದು ಶೈಲಜಾ ಹೇಳಿದ್ದಾರೆ.
Discussion about this post