ರೋಗ ರುಜಿನ, ನೋವು, ನಲಿವು, ಸಂಕಷ್ಟ, ಖಿನ್ನತೆ ಯಾರಿಗೆ ಇರುವುದಿಲ್ಲ ಹೇಳಿ? ಹಾಗಂತ ಕಷ್ಟ ಬಂದವರೆಲ್ಲಾ ಬದುಕು ಮುಗಿದು ಹೋಯ್ತು ಎಂದು ತಲೆ ಮೇಲೆ ಕೈ ಹೊತ್ತು ಕೂತರೇ, ಖಂಡಿತಾ ಇಲ್ಲ . ಇಂತಹ ಸಂಕಷ್ಟದ ನಡುವೆಯೂ ನಗುನಗುತ್ತಾ ಜೀವನ ಸಾಗಿಸುತ್ತಿರುವವರ ಸಂಖ್ಯೆ ಎಷ್ಟಿಲ್ಲ ಹೇಳಿ.
ಎಂತಹ ಅಸಾಧ್ಯ ನೋವನ್ನು ಕ್ಷಣಮಟ್ಟಿಗಾದರೂ ಮರೆಸುವ ತಾಕತ್ತು ಇರುವುದು ನಗುವಿಗೆ ಮಾತ್ರ. ಇಂತಹ ನಗುವಿನ ದಿನವಿಂದು. ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗುವಿನ ದಿನ ಎಂದೇ ಆಚರಿಸಲಾಗುತ್ತದೆ.
ಹಾಹಾ…ಹೋಹೋ ಅನ್ನುವ ನಗುವಿನಿಂದ ನಮಗಾಗುವ ಲಾಭವೇನು ಅನ್ನುವುದನ್ನು ಈಗಾಗಲೇ ನೀವು ನಮ್ಮ ಪುಟದಲ್ಲಿ ಓದಿರುತ್ತೀರಿ. ಹಾಗಾದ್ರೆ ಈ ನಗುವಿನ ದಿನ ಹುಟ್ಟಿದ್ದು ಹೇಗೆ ಅನ್ನುವುದು ಈಗ ನಾವು ಹೇಳ್ತಿವಿ.
ಅಮೆರಿಕದ ಪತ್ರಕರ್ತ ನಾರ್ಮನ್ ಕಸಿನ್ಸ್ ನಗುವಿನ ರೋಗ ನಿವಾರಕ ಶಕ್ತಿಯನ್ನು ಮೊದಲು ಕಂಡು ಹಿಡಿದು ವೈದ್ಯಲೋಕವನ್ನು ಚಕಿತಗೊಳಿಸಿದ. ಅದನ್ನು ಅನಾಟಮಿ ಆಫ್ ಇಲ್ನೆಸ್ ಎಂಬ ಪುಸ್ತಕದಲ್ಲಿ 1978ರಲ್ಲಿ ಬರೆದಿಟ್ಟ. ಇದು ನಗೆಯೋಗದ ಮೊದಲ ಹೆಜ್ಜೆ.
ನಾರ್ಮನ್ ಕಸಿನ್ಸ್ನ ಪ್ರಯೋಗದಿಂದ ಪ್ರೇರಣೆಗೊಂಡ ಡಾ. ಮದನ್ ಕಟಾರಿಯಾ ಅವರು ನಗೆಯೋಗ ಕೇಂದ್ರಗಳನ್ನು ಅಭಿವದ್ಧಿಪಡಿಸಿ ಈ ಹೊಸ ಚಿಕಿತ್ಸಾ ಪದ್ಧತಿಯನ್ನು 1995ರ ಮಾರ್ಚ್ 13ರಂದು ಆರಂಭಿಸಿದರು. ಇದು ಹೀಗೆ ಮೊದಲು ಮುಂಬಯಿಯ ಅಂಧೇರಿಯಲ್ಲಿರುವ ಲೋಕಂಡವಾಲ ಉದ್ಯಾನವನದಲ್ಲಿ ಆರಂಭಗೊಂಡಿತು. 1998ರಲ್ಲಿ ಮೊದಲ ನಗೆ ದಿನ ಪ್ರಾರಂಭವಾಯ್ತು.
ಇದನ್ನು ಮುಂಬೈಗೆ ತೆರಳಿದ್ದ ನಿವೃತ್ತ ರೈಲ್ವೆ ಇಂಜಿನಿಯರ್ ಬಿ.ಕೆ.ಸತ್ಯನಾರಾಯಣ ವೀಕ್ಷಿಸಿದರು. ನಮ್ಮ ಬೆಂಗಳೂರಿನಲ್ಲೂ ಇದನ್ನು ಪ್ರಾರಂಭಿಸಬೇಕು ಎಂದು ಮಾಧವನ್ ಪಾರ್ಕ್ನಲ್ಲಿ 10 ಜನರೊಂದಿಗೆ ಮೊದಲ ಬಾರಿಗೆ 1998ರ ಏಪ್ರಿಲ್ 6ರಂದು ಪ್ರಾರಂಭಿಸಿದರು.
ಇದೀಗ ಬೆಂಗಳೂರಿನಲ್ಲಿ ಲೆಕ್ಕವಿಲ್ಲದ್ದಷ್ಟು ನಗೆ ಕ್ಲಬ್ ಗಳಿವೆ.
Discussion about this post