ಈ ಹಿಂದೆ ಕೇರಳದಲ್ಲಿ ಝೀಕಾ ವೈರಸ್ ( Zika Virus) ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು. ಡೆಂಘೀ ಮತ್ತು ಮಲೇರಿಯಾ ಇರುವ ಕಡೆ ಎಚ್ಚರ ವಹಿಸಬೇಕು
ಬೆಂಗಳೂರು : ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ( Zika Virus) ಪ್ರಕರಣ ಪತ್ತೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ದೃಢಪಡಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮಾನ್ವಿ ತಾಲೂಕಿನ ಐದು ವರ್ಷದ ಬಾಲಕಿಗೆ ಝೀಕಾ ವೈರಸ್ (Zika Virus) ತಗುಲಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ಜ್ವರ, ವಾಂತಿ, ಬೇಧಿಯಿಂದ ಬಳಲುತ್ತಿದ್ದ ಬಾಲಕಿಗೆ ಮೊದಲು ಸಿಂಧನೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಡೆಂಘೀ ಜ್ವರದ ಹಿನ್ನೆಲೆಯಲ್ಲಿ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಸ್ಯಾಂಪಲ್ ಗಳನ್ನು ಪುಣೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿತ್ತು.
ವಿಮ್ಸ್ ಆಸ್ಪತ್ರೆಯಿಂದ ಕಳುಹಿಸಲ್ಪಟ್ಟ ಸ್ಯಾಂಪಲ್ ಗಳ ಪೈಕಿ ಬಾಲಕಿಯ ಸ್ಯಾಂಪಲ್ ಬಗ್ಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಝೀಕಾ ವೈರಸ್ ಸೋಂಕಿತ ಬಾಲಕಿ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಅವರ ಕುಟುಂಬ ಸದಸ್ಯರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಸಂಗ್ರಹಿಸಲಾಗಿದೆ.
ಜೊತೆಗೆ ರಾಯಚೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದು, ಝೀಕಾ ವೈರಸ್ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಝೀಕಾ ವೈರಸ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡೋದಾಗಿ ಸುಧಾಕರ್ ಹೇಳಿದ್ದಾರೆ.
Discussion about this post