ಬೆಂಗಳೂರು : ಶಾಸಕ ಹ್ಯಾರಿಸ್ ಪುತ್ರ, ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ವಿವಾದದಿಂದ ಮುಕ್ತವಾಗುವ ಲಕ್ಷಣಗಳಿಲ್ಲ. ಒಂದಲ್ಲ ಒಂದು ವಿವಾದ ನಲಪಾಡ್ ಮೇಲೆ ಕೇಳಿ ಬರುತ್ತಿದೆ. ಮೊನ್ನೆ ಮೊನ್ನೆ ಪಾದಯಾತ್ರೆ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಮೊಹಮ್ಮದ್ ನಲಪಾಡ್ ಕಾಲರ್ ಹಿಡಿದು ದಬ್ಬಿದ್ದರು.
ಇದೀಗ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಹಾಗೂ ಅವರ ಚಾಲಕ ಮತ್ತು ಸ್ನೇಹಿತರ ಮೇಲೆ ನಲಪಾಡ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿದ ಸುದ್ದಿ ಹರಿದಾಡುತ್ತಿದೆ.
ಯುವ ಕಾಂಗ್ರೆಸ್ ಚುನಾವಣೆ ವಿಚಾರಕ್ಕೆ ಗಲಾಟೆ ನಡೆದಿದೆ ಅನ್ನಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ ಗೌಡ ಅವರನ್ನು ಬೆಂಬಲಿಸಿದ್ದೀಯಾ, ನನ್ನ ಬೆಂಬಲಿಸಿಲ್ಲ ಎಂದು ಹಲ್ಲೆ ಮಾಡಿದ್ದಾರೆ ಎಂದು ಸಿದ್ದು ಆರೋಪಿಸಿ ಕಾಂಗ್ರೆಸ್ ನಾಯಕರಿಗೆ ದೂರು ನೀಡಿದ್ದಾರೆ ಅನ್ನಲಾಗಿದೆ.
ಆದರೆ ಇದೀಗ ಸಿದ್ದು ಹಳ್ಳೇಗೌಡ ಪ್ರತಿಕ್ರಿಯೆ ನೀಡಿದ್ದು, ನಾನು ಹೋಟೆಲ್ ಹೋಗಿದ್ದು ನಿಜ, ಅಲ್ಲಿ ಪೂರ್ವಭಾವಿ ಸಭೆ ಮುಗಿಸಿಕೊಂಡು ಬಂದಿದ್ದೇನೆ. ನಲಪಾಡ್ ಕಡೆಯವರು ನನಗೆ ಬೆದರಿಕೆ ಹಾಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ನನ್ನದಲ್ಲ ಅಂದಿದ್ದಾರೆ.
ಇನ್ನು ಈ ಬಗ್ಗೆ ನಲಪಾಡ್ ಪ್ರತಿಕ್ರಿಯೆ ನೀಡಿದ್ದು ಘಟನೆ ನಡೆದಾಗ ನಾನು ಅಲ್ಲಿ ಇರಲೇ ಇಲ್ಲ. ಆ ವೇಳೆ ನನ್ನ ಕುಟುಂಬದೊಂದಿಗೆ ಇದ್ದೆ. ಹೀಗಿರುವಾಗ ನಾನು ಹಲ್ಲೆ ಮಾಡಲು ಸಾಧ್ಯವೇ ಅಂದಿದ್ದಾರೆ.
Discussion about this post