ಮಂಡ್ಯ : ಕೊರೋನಾ ಸೋಂಕಿನ ಎರಡನೇ ಅಲೆ ಪ್ರಾರಂಭವಾಗುವ ಮುಂಚೆ ಚಿತ್ರರಂಗದ ಮಂದಿ ಮಾಡಿದ ಎಡವಟ್ಟು ಒಂದಲ್ಲ ಎರಡಲ್ಲ. ತಮ್ಮ ಚಿತ್ರದ ಪ್ರಚಾರದ ಸಲುವಾಗಿ ಮಾಸ್ಕ್ ಕಿತ್ತೆಸೆದು ಜಿಲ್ಲೆ ಜಿಲ್ಲೆ ಸುತ್ತಿದರು. ಸಾಮಾಜಿಕ ಅಂತರವನ್ನು ಮರೆತು ಜನ ಸೇರಿಸಿದರು. ಕೊರೋನಾ ಅನ್ನುವ ಮಹಾಮಾರಿ ಇದೆ ಅನ್ನುವುದನ್ನೇ ಮರೆತರು. ಇದರ ಬೆನ್ನಲ್ಲೇ ರಾಜ್ಯಕ್ಕೆ ಎರಡನೇ ಅಲೆಯ ಆಗಮನವಾಯ್ತು. ರೂಪಾಂತರಿ ವೈರಸ್ ಗಳ ಕಾಟಕ್ಕೆ ಇಡೀ ರಾಜ್ಯ ತತ್ತರಿಸಿ ಹೋಯ್ತು.
ಇವರಿಗೆ ಸಾಥ್ ಅನ್ನುವಂತೆ ರಾಜಕಾರಣಿಗಳು ಚುನಾವಣಾ ಪ್ರಚಾರ ನಡೆಸಿದರು. ಕೊರೋನಾ ಸೋಂಕು ಕೊಲ್ಲುತ್ತದೆ ಎಂದು ಗೊತ್ತಿದ್ದರೂ ತಾವೇ ಮಾಡಿದ ನಿಯಮಗಳನ್ನು ಗಾಳಿಗೆ ತೂರಿದರು. ಭಾಷಣಕ್ಕೆಂದು ಹೋದವರು ಗ್ಲೌಸ್, ಫೇಸ್ ಶೀಲ್ಡ್ ಎಂದೆಲ್ಲಾ ಸೇಫ್ ಆಗಿದ್ದರು. ಸೇರಿದ್ದ ಜನ ಸಮಸ್ಯೆ ಎದುರಿಸಿದರು.
ಇದೀಗ ಎರಡನೇ ಅಲೆಯ ಅಂತ್ಯದಲ್ಲಿದ್ದೇವೆ. ಮತ್ತೆ ರಾಜಕಾರಣಿಗಳು ಎಡವಟ್ಟು ಪ್ರಾರಂಭಿಸಿದ್ದಾರೆ. ಇದಕ್ಕೆ ಸಾಕ್ಷಿ ಗುರುವಾರ ಮಂಡ್ಯದಲ್ಲಿ ಜೆಡಿಎಸ್ ಮಾಡಿದ ಕಾರ್ಯಕ್ರಮ.
ಮದ್ದೂರು ಕ್ಷೇತ್ರದ ಶಾಸಕ ಡಿ, ತಮ್ಮಣ್ಣ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಅಪ್ಪ ಕುಮಾರಸ್ವಾಮಿ, ಮಗ ನಿಖಿಲ್ ಆಗಮಿಸಿದ್ದರು. ಈ ವೇಳೆ ಇವರಿಬ್ಬರನ್ನು ನೋಡಲು ಜನ ತಳ್ಳಾಟ ನೂಕಾಟ ನಡೆಸಿದರು. ಬಂದವರ ಪೈಕಿ ಬಹುತೇಕರಿಗೆ ಮಾಸ್ಕ್ ಇರಲಿಲ್ಲ. ಸಾಮಾಜಿಕ ಅಂತರ ಏನು ಅನ್ನುವಂತಿತ್ತು ವಾತಾವರಣ. ಒಟ್ಟಿನಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆಗೆ ಮುನ್ನುಡಿ ಅನ್ನುವಂತಿತ್ತು ಪರಿಸ್ಥಿತಿ.
Discussion about this post