ವಿಜಯಪುರದ ಬಬಲಾದಿ (Babaladi) ಸದಾಶಿವ ಮುತ್ಯಾಮಠದ ಪೀಠಾಧಿಪತಿ ಭವಿಷ್ಯವಾಣಿ ನುಡಿದಿದ್ದಾರೆ. ಬಬಲಾದಿ ಮಠದ ಜಾತ್ರೆ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಸಿದ್ದು ಮುತ್ಯಾ ಸ್ವಾಮೀಜಿ ಅವರಿಂದ ಕಾಲಜ್ಞಾನದ ಭವಿಷ್ಯವಾಣಿ ಹೊರ ಬಿದ್ದಿದೆ.
ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ, ಹಿಂಗಾರಿ ಮಧ್ಯಮ ಫಲ, ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಹಾಹಾಕಾರ, ಕೆಟ್ಟ ಪರಿಣಾಮ, ಕೈ ಬಳೆ ಒಡೆದಾವು, ಕಣ್ಣೀರು ಹರಿದಾವು. ಕಲಿ ಪುರಷನ ಮುಂದೆ ಆಟ ಕೆಟ್ಟು ಹೋಗಿದೆ. ಪಡವಲು ದಿಕ್ಕಿಗೆ ತ್ರಾಸು, ಕೇಡು. ಜೋಳ, ಕಡೆಲೆ ರಸ ವರ್ಗಗಳು ಕೆಂಡಮಂಡಲ. ಉತ್ತರ ದಿಕ್ಕಿನಿಂದ ಮುಂದೆ ಮುರುಕಾದಿತು. ನೀತಿಯಿಂದ ನಿಜರೂಪ ತೋರುತೈತೆ. ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ ಎಂದು ಗೂಢಾರ್ಥದ ವಾಣಿ ನುಡಿದ್ದಾರೆ.
ಅಂದ ಹಾಗೇ ವಿಜಯಪುರದ ಬಬಲಾದಿ (Babaladi) ಸದಾಶಿವ ಮುತ್ಯಾಮಠ ಮಹಾಶಕ್ತಿಯನ್ನು ಹೊಂದಿರುವ ಮಠ ಎಂದು ನಂಬಲಾಗಿದೆ. ಈ ಕ್ಷೇತ್ರವನ್ನು ಬೆಂಕಿಯ ಬಬಲಾದಿ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ನಿಂತು ಆಡಿದ ಮಾತು ಸುಳ್ಳಾಗದು ಅನ್ನುವುದು ಭಕ್ತರ ನಂಬಿಕೆ.
2021ರ ಭವಿಷ್ಯವಾಣಿಯಲ್ಲಿ ರಾಜಕೀಯ ಏರಿಳಿತ, ಕೊರೋನಾ ಮಹಾಮಾರಿ, ಗಣ್ಯ ವ್ಯಕ್ತಿಗಳ ಸಾವು, ಅತೀ ವೃಷ್ಟಿ, ಪ್ರವಾಹ, ಯುದ್ಧ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕಾಲಜ್ಞಾನದ ಭವಿಷ್ಯ ನುಡಿಯಲಾಗಿತ್ತು. ಅದು ಸತ್ಯವಾಗಿದೆ ಕೂಡಾ. ಇನ್ನು ಈ ಹಿಂದಿನ ವರ್ಷಗಳಲ್ಲಿ ಹೇಳಿದ ಭವಿಷ್ಯವೂ ಸುಳ್ಳಾದ ಉದಾಹರಣೆಗಳಿಲ್ಲ. ಹೀಗಾಗಿ ಇಲ್ಲಿನ ಭವಿಷ್ಯವಾಣಿಯ ಬಗ್ಗೆ ಜನರಲ್ಲಿ ಅಪಾರ ನಂಬಿಕೆ.
ಹೀಗಾಗಿಯೇ ಜಾತ್ರೆಯ ವೇಳೆ ನುಡಿಯೋ ಭವಿಷ್ಯವಾಣಿ ಕೇಳಲು ಜನ ಕಾತರದಿಂದ ಕಾಯುತ್ತಿರುತ್ತಾರೆ. ಈ ಭವಿಷ್ಯವಾಣಿ ನುಡಿಯುವುದಕ್ಕೂ ಹಲವು ಕ್ರಮಗಳನ್ನು ಅನುಸರಿಸಲಾಗುತ್ತದೆ. ಶಿವರಾತ್ರಿಯ ನಂತರದ ಮೂರನೇ ದಿನ ಭವಿಷ್ಯವಾಣಿ ನುಡಿಯುವುದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ, ಭವಿಷ್ಯವಾಣಿ ನುಡಿಯುವ ದಿನ ಮಠದ ಪೀಠಾಧಿಪತಿಗಳು ನದಿಯಲ್ಲಿ ಸ್ನಾನ ಮುಗಿಸಿ, ಅಲ್ಲೇ ಪೂಜೆ ಮುಗಿಸಿ ಮಠಕ್ಕೆ ಮರಳುತ್ತಾರೆ. ಬಳಿಕ ಕೆಲ ಸ್ವಾಮೀಜಿಗಳ ಮುಂದೆ ಭವಿಷ್ಯವಾಣಿ ನುಡಿಯಲಾಗುತ್ತದೆ. ಇದಾದ ಬಳಿಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಆಚರಣೆಗಳು ನಡೆಯುತ್ತದೆ. ಇದು ಮುಕ್ತಾಯವಾದ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಲಜ್ಞಾನವನ್ನು ನುಡಿಯಲಾಗುತ್ತದೆ.
500 ವರ್ಷಗಳ ಹಿಂದೆ ಮಠದ ಪೀಠಾಧಿಪತಿಯಾಗಿದ್ದ ಸದಾಶಿವ ಅಜ್ಜನವರು ನುಡಿದ ಕಾಲಜ್ಞಾನವನ್ನು ಚಿಕ್ಕಯ್ಯಪ್ಪನವರು ಬರೆದಿಟ್ಟಿದ್ದು, ಅದೇ ಕಾಲಜ್ಞಾನವನ್ನು ಪ್ರತೀ ವರ್ಷ ಓದಿ ಹೇಳಲಾಗುತ್ತದೆ.
Discussion about this post