ವಿಜಯಪುರ ಜಿಲ್ಲೆಯ ವಕ್ಫ್ ಆಸ್ತಿ ವಿವಾದಕ್ಕೆ ತೆರೆ ಎಳೆದ ಸರ್ಕಾರ
ವಿಜಯಪುರ ಜಿಲ್ಲೆಯಲ್ಲಿ ಗೊಂದಲಗಳಿಗೆ ಕಾರಣವಾಗಿದ್ದ ವಕ್ಫ್ ಆಸ್ತಿ ವಿವಾದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ತೆರೆ ಎಳೆದಿದ್ದಾರೆ.
ವಿಜಯಪುರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಒಂದೇ ಒಂದು ಎಕರೆ ಜಮೀನು ವಕ್ಫ್ ಮಂಡಳಿಗೆ ವರ್ಗಾವಣೆಯಾಗಿಲ್ಲ. ಈ ವಿಷಯವಾಗಿ ಯಾವುದೇ ರೈತರಿಗೆ ನೋಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊನವಾಡ ಗ್ರಾಮದಲ್ಲಿ ೧ ಸಾವಿರದ ೨೦೦ ಎಕರೆ ರೈತರ ಭೂಮಿ ವಕ್ಫ್ಗೆ ಸೇರಿದೆ ಎಂಬ ಸುದ್ದಿ ಸುಳ್ಳಾಗಿದ್ದು, ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ. ೧೯೭೪ರಲ್ಲಿ ವಕ್ಫ್ ಗೆಜೆಟ್ನಲ್ಲಿ ತಪ್ಪಾಗಿ ನಮೂದಿಸಲಾಗಿದೆ.
೧೯೭೭ರಲ್ಲಿ ಈ ತಪ್ಪನ್ನು ವಕ್ಫ್ ಮಂಡಳಿ ಸರಿಪಡಿಸಿದ್ದು, ಹೊನವಾಡ ಗ್ರಾಮದ ೧೦ ರಿಂದ ೧೧ ಎಕರೆ ಜಮೀನು ಮಾತ್ರ ಸೇರಿದೆ. ಗೆಜೆಟ್ ನೋಟಿಫಿಕೇಶನ್ನಿಂದ ಗೊಂದಲ ಸೃಷ್ಟಿಯಾಗಿದ್ದು, ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.