ಭವಿಷ್ಯದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿ ಮಾಡುವ ನಿರೀಕ್ಷೆ
ಆರೈಕೆ ಮತ್ತು ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿ ಮಾಡುವ ನಿರೀಕ್ಷೆ ಇದೆ ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ಈಗ ವೈದ್ಯಕೀಯ ಕೇಂದ್ರಗಳಲ್ಲಿ ಸೂಕ್ತ ಆರೈಕೆ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಇಂಟ್ಯೂಟಿವ್, ಈ ಕ್ಷೇತ್ರದಲ್ಲಿ ಜಾಗತಿಕ ತಂತ್ರಜ್ಞಾನ ಹೊಂದಿದ್ದು ಮತ್ತು ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ. ಆರೋಗ್ಯ ಆವಿಷ್ಕಾರದ ಪ್ರಗತಿಗೆ ಇನ್ನಷ್ಟು ಉತ್ತೇಜನ ನೀಡಲು ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದರಿಂದ ಸಾಕಷ್ಟು ಪ್ರಯೋಜನಗಳಾಗಲಿವೆ ಎಂದು ಸಚಿವರು ತಿಳಿಸಿದರು.
“ನಾವು ಇಂಟ್ಯೂಟಿವ್ನ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಉದ್ಘಾಟಿಸುತ್ತಿರುವುದು ಮಹತ್ವದ ಮೈಲಿಗಲ್ಲಾಗಿದೆ. ರೊಬೊಟಿಕ್ಸ್ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಶಸ್ತ್ರಚಿಕಿತ್ಸೆಯ ವಿಧಾನದಲ್ಲಿ ಪರಿಣಾಮಕಾರಿಯಾಗಲಿದೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುತ್ತದೆ. ಈ ಕೇಂದ್ರವು ಹೆಚ್ಚಿನ ವೈದ್ಯರಿಗೆ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ-ಈ ಕ್ಷೇತ್ರದಲ್ಲಿ ಭಾರತವು ಈಗಾಗಲೇ ಜಾಗತಿಕವಾಗಿ ಮುಂಚೂಣಿಯಲ್ಲಿದೆ.
ಇಂತಹ ಆವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಪಾಟೀಲ್ ಹೇಳಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಂತಹ ಸಹಯೋಗದ ಪ್ರಯತ್ನಗಳ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳು ಹಾಗೂ ಕರ್ನಾಟಕದಾದ್ಯಂತ ಇದನ್ನು ವಿಸ್ತರಿಸುವ ಬಗ್ಗೆ ಸಚಿವರು ಆಶಾವಾದ ವ್ಯಕ್ತಪಡಿಸಿದರು.
“ಆಧುನಿಕ ಆರೋಗ್ಯ ಸೇವೆಯು ಕರ್ನಾಟಕದ ಮೂಲೆ ಮೂಲೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಇಂಟ್ಯೂಟಿವ್ನಂತಹ ವೈದ್ಯಕೀಯ ತಂತ್ರಜ್ಞಾನದ ಸಂಸ್ಥೆಗಳೊಂದಿಗೆ ಕೈ ಜೋಡಿಸಲು ಸರ್ಕಾರ ಮುಂದಾಗಿದೆ” ಎಂದು ಸಚಿವರು ಹೇಳಿದರು.