ಕಾಲುಬಾಯಿ ರೋಗ ಲಸಿಕಾ ಅಭಿಯಾನ
ಚಿತ್ರದುರ್ಗ ಜಿಲ್ಲೆಯಾದ್ಯಂತ ಇದೇ ಅ.21 ರಿಂದ ನ.20 ರವರೆಗೆ ನಡೆಯಲಿರುವ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಮನೆ ಮನೆಗಳಿಗೆ ತೆರಳಿ ಜಾನುವಾರಗಳಿಗೆ ಲಸಿಕೆ ನೀಡುವುದರ ಜೊತೆಗೆ ದೇವರ ಎತ್ತುಗಳು ಹಾಗೂ ನಗರ ಪ್ರದೇಶದಲ್ಲಿನ ಬಿಡಾಡಿ ದನಗಳಿಗೂ ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಸಿಕಾ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಯಾವುದೇ ಜಾನುವಾರುಗಳು ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು. ಶೇ.100 ರಷ್ಟು ಲಸಿಕಾಕರಣ ಗುರಿ ತಲುಪಬೇಕು.
ಲಸಿಕೆ ನೀಡಿದ ಪ್ರತಿ ಜಾನುವಾರು ಮಾಹಿತಿಯನ್ನು ತಪ್ಪದೇ ತಂತ್ರಾಂಶದಲ್ಲಿ ವರದಿ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು. 20ನೇ ಜಾನುವಾರು ಗಣತಿ ಆಧಾರಿಸಿ ಜಿಲ್ಲೆಯಲ್ಲಿ 3,38,907 ಜಾನುವಾರುಗಳಿವೆ ಅಂದಾಜಿಸಲಾಗಿದೆ.
6 ತಾಲ್ಲೂಕುಗಳಲ್ಲಿ 991 ಗ್ರಾಮಗಳನ್ನು ಲಸಿಕಾಕರಣ ಕಾರ್ಯಕ್ಕೆ ಗುರುತಿಸಿ, 3390 ಬ್ಲಾಕ್ಗಳನ್ನಾಗಿ ವಿಭಾಗಿಸಲಾಗಿದೆ. 291 ಲಸಿಕಾದಾರರು ಮನೆಗಳಿಗೆ ತೆರಳಿ ಲಸಿಕೆ ನೀಡಲಿದ್ದಾರೆ.
ಈ ಹಿಂದೆ ಜರುಗಿದ 5ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ 1,89,030 ದನಗಳು ಹಾಗೂ 83273 ಎಮ್ಮೆಗಳು ಸೇರಿ ಒಟ್ಟು 2,72,303 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 5ನೇ ಸುತ್ತಿನ ಉಳಿಕೆ ಲಸಿಕೆ ಅಭಿಯಾನದಲ್ಲಿ 16,350 ಡೋಸ್ ಲಸಿಕೆ ಉಳಿದಿದ್ದು, 2,73,350 ಲಸಿಕಾ ಡೋಸ್ಗಳು ಸರಬರಾಜು ಆಗಿವೆ.
ಒಟ್ಟು 2,89,700 ಲಸಿಕೆ ಡೋಸ್ ಸಂಗ್ರಹ ಲಭ್ಯವಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.