ಅಮೆರಿಕಾದಲ್ಲಿ ಟ್ರಂಪ್ ಅಧಿಕಾರವಧಿ ಮುಗಿದು ಬಿಡೆನ್ ಪರ್ವ ಪ್ರಾರಂಭವಾದ ಬಳಿಕ ಭಾರತದ ಜೊತೆ ಸಂಬಂಧ ಹೇಗಿರಲಿದೆ ಅನ್ನುವ ಕುತೂಹಲವಿತ್ತು. ಈ ಹಿಂದೆ ಬಿಡೆನ್ ಭಾರತದ ಬಗ್ಗೆ ಅಷ್ಟೇನು ಒಲವು ಹೊಂದಿರಲಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಮೆರಿಕಾ ಭಾರತದೊಂದಿಗೆ ಸಂಬಂಧ ಮುಂದುವರಿಸಲು ಬಯಸಿದೆ. ಜೊತೆಗೆ ಟ್ರಂಪ್ ಹಾಗೂ ಮೋದಿ ಅವಧಿಯಲ್ಲಿ ಬೆಸೆಯಲ್ಪಟ್ಟ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಬಿಡೆನ್ ಮುಂದಾಗಿದ್ದಾರೆ.
ಈ ನಡುವೆ ಕೊರೋನಾ ನಿಯಂತ್ರಣ, ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ದೇಶವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ ಹೆಚ್ಚುವರಿ 41 ಮಿಲಿಯನ್ ಡಾಲರ್ ಧನಸಹಾಯವನ್ನು ಅಮೆರಿಕ ಘೋಷಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಭಾರತವು ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ ಇನ್ನಿಲ್ಲದಂತೆ ಹೋರಾಡಿತ್ತು. 3,00,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿ ದೇಶ ತತ್ತರಿಸಿ ಹೋಗಿದ್ದ ಸಂದರ್ಭದಲ್ಲೂ ಧೃತಿಗೆಡದ ಸರ್ಕಾರ ಜನರ ಜೀವ ಉಳಿಸಲು ಹೋರಾಡಿತ್ತು. ಆದರೆ ರೂಪಾಂತರಿ ವೈರಸ್ ಹಾವಳಿ ಹಾಗೂ ಕೆಲ ರಾಜ್ಯ ಸರ್ಕಾರಗಳ ತಪ್ಪು ಹೆಜ್ಜೆಗಳ ಕಾರಣದಿಂದ ನಿರೀಕ್ಷಿತ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿರಲಿಲ್ಲ. ಹೀಗಾಗಿಯೇ ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯಿಂದ ರೋಗಿಗಳು ತತ್ತರಿಸಿದ್ದರು.
ಇದೀಗ ಭಾರತದ ಸಹಾಯಕ್ಕೆ ಧಾವಿಸಿರುವ ಅಮೆರಿಕಾ, ನಮ್ಮ ದೇಶದ ಆರೋಗ್ಯ ತುರ್ತು ಸಮಯದಲ್ಲಿ ಭಾರತ ಉದಾರವಾಗಿ ಸಹಾಯಹಸ್ತ ಚಾಚಿತ್ತು. ಹೀಗಾಗಿ ಭಾರತದ ಜನರೊಂದಿಗೆ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅಮೆರಿಕಾ ಕೈ ಜೋಡಿಸುತ್ತಿದೆ ಎಂದು ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಏಜೆನ್ಸಿ ಹೇಳಿದೆ.
Discussion about this post