ಇಂದು ಮಂಗಳೂರಿನಲ್ಲಿ ಸಿನಿಮೀಯಾ ಶೈಲಿಯಲ್ಲಿ ಬೆನ್ನಟ್ಟಿ ಕಳ್ಳನನ್ನು ಸೆರೆಹಿಡಿದ ಪೊಲೀಸರೊಬ್ಬರ ವಿಡಿಯೋ ದೇಶಾದ್ಯಂತ ವಿಶೇಷ ಸದ್ದು ಮಾಡುತ್ತಿದೆ. ASI ವರುಣ್ ಚೇಸಿಂಗ್ ಗೆ ಬರೋಬ್ಬರಿ ದೇಶದ ಎಲ್ಲಾ ಮೂಲೆಗಳಿಂದಲೂ ಶಹಬ್ಬಾಸ್ ಗಿರಿ ಕೇಳಿಬರುತ್ತಿದೆ. ಅದಕ್ಕೆ ಅವರು ಅರ್ಹರೂ ಕೂಡ. ಆದೇ ರೀತಿ ಪೊಲೀಸ್ ಚೇಸಿಂಗ್ ಇಡೀ ದೃಶ್ಯಾವಳಿಯನ್ನು ಅದ್ಭುತವಾಗಿ ಸೆರೆಹಿಡಿದ ವ್ಯಕ್ತಿಯೂ, ಪೋಲಿಸ್ ಅಧಿಕಾರಿಯಷ್ಟೇ ಪ್ರಶಂಸೆಗೆ ಅರ್ಹರು ಎಂದೆನಿಸುತ್ತದೆ. ಟಿವಿ 9 ಮಂಗಳೂರು ವರದಿಗಾರ ಪ್ರಥ್ವಿರಾಜ್ ಬೊಮ್ಮನಕೆರೆ ಈ ಸಾಹಸಮಯ ಹಾಗೂ ಅಪಾಯಕಾರಿ ಚೇಸಿಂಗ್ ದೃಶ್ಯದ ಹಿಂದಿರುವ ವ್ಯಕ್ತಿ.
ಒಂದು ಕೈಯಲ್ಲಿ ಕ್ಯಾಮೇರಾ ಹಿಡಿದುಕೊಂಡು ರಸ್ತೆಯ ಉದ್ದಗಲಕ್ಕೆ ಹಾಗೂ ವಾಹನ ದಟ್ಟಣಿಯಿರುವ ಅನೀರೀಕ್ಷಿತ ತಿರುವುಗಳಲ್ಲಿ ಓಡಿಕೊಂಡು ಘಟನೆಯನ್ನು ಸೆರೆಹಿಡಿಯುವುದು ಅಂದ್ರೆ ಅದೊಂದು ಸಾಹಸವೇ ಎಂದು ಹೇಳಬೇಕು. ಕಳ್ಳನು ಪೋಲಿಸ್ ಕೈಗೆ ಸಿಗುವ ತನಕ ಎಲ್ಲೂ ತನ್ನ ಕ್ಯಾಮರಾ ರೆಕಾರ್ಡಿಂಗನ್ನು ನಿಲ್ಲಿಸದೆ ಪೊಲೀಸ್ ಅಧಿಕಾರಿಯ ಕಾರ್ಯನಿಷ್ಠೆಯನ್ನು ಯಥಾವತ್ ಸೆರೆಹಿಡಿದು ಪೋಲಿಸ್ ಇಲಾಖೆಯ ಕಾರ್ಯದಕ್ಷತೆಗೆ ಸಾಕ್ಷಿ ನೀಡಿದ ಪ್ರಥ್ವಿರಾಜ್ ನಿಜಕ್ಕೂ ಅಭಿನಂದನಾರ್ಹರು. ಇದು ನೈಜ ಪತ್ರಕರ್ತನೋರ್ವನ ಕಾರ್ಯ ಕಾರ್ಯದಕ್ಷತೆಯ ಒಂದು ಝಲಕ್ ಎಂದರೂ ತಪ್ಪಗಲಾರದು.
ಪತ್ರಕರ್ತರೆಂದರೆ ಹಾಗೆನೇ. ಹಲವರ ಬದುಕು ಹಸನಾಗಲು, ಕೆಲವರ ನೋವು ಮರೆಯಾಗಲು , ಇನ್ನು ಕೆಲವರಿಗೆ ನ್ಯಾಯ ದೊರಕಿಸಿಕೊಡಲು ಪತ್ರಕರ್ತರ ಕಾರ್ಯದಕ್ಷತೆ ಯಾವತ್ತೂ ಒಂದು ನಿಮಿತ್ತವಾಗಿ ಕಂಡುಬಂದದ್ದಿದೆ. ಪತ್ರಕರ್ತರೋರ್ವರ ವಸ್ತುನಿಷ್ಠವಾದ ಒಂದು ವರದಿಯು ನಮ್ಮ ಸಮಾಜದ ಅರ್ಹರೋರ್ವರನ್ನು ದೇಶದಲ್ಲೇ ಶ್ರೇಷ್ಟವಾದ ಪದ್ಮಶ್ರೀ ಪ್ರಶಸ್ತಿಯತ್ತ ಕೊಂಡೊಯ್ದ ಘಟನೆಗೂ ನಾವು ಸಾಕ್ಷಿಯಾಗಿದ್ದೇವೆ.
ಆದರೆ ಇಷ್ಟೆಲ್ಲಾ ಆದರೂ ಕೆಲವೊಮ್ಮೆ ಪತ್ರಕರ್ತರ ಕಾರ್ಯದಕ್ಷತೆ ಸಮಾಜದಲ್ಲಿ ಗುರುತಿಸಲ್ಪಡದೆ ಹೋಗುತ್ತಿದೆ ಎಂಬ ಬೇಸರವಿದೆ. ಪತ್ರಿಕಾಧರ್ಮ ಅರಿತ ಪತ್ರಕರ್ತನೋರ್ವನಿಗೆ ’ಗುರುತಿಸಲ್ಪಡುವಿಕೆ’ ಎಂಬ ಗೀಳು ಇರುವುದಿಲ್ಲವಾದರೂ ಆತನ ಕೆಲಸವನ್ನು ಶ್ಲಾಘನೆಗೆ ಒಳಪಡಿಸುವುದು ಆತನ ಆತ್ಮಬಲಕ್ಕೆ ಹಾಗೂ ಮನೋಸ್ಥೈರ್ಯಕ್ಕೆ ಇಮ್ಮಡಿ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಬಹುದು. ಇಂದು ಪ್ರಥ್ವಿರಾಜ್ ಎಂಬ ಪತ್ರಕರ್ತ ಪೋಲಿಸ್ ಚೇಸಿಂಗಿನ ದೃಶ್ಯವನ್ನು ಸೆರೆಹಿಡಿಯದೆ ಇರುತ್ತಿದ್ದರೆ ವರುಣ್ ಎಂಬ ಪೊಲೀಸಿನ ಕಾರ್ಯನಿಷ್ಠೆಯ ಬಗ್ಗೆ, ಪರಿಶ್ರಮದ ಬಗ್ಗೆ ಸಮಾಜಕ್ಕೆ ಬಿಡಿ ಪೋಲಿಸ್ ಇಲಾಖೆಗೆನೇ ತಿಳಿಯುತ್ತಿರಲಿಲ್ಲ.
ಮಂಗಳೂರು ಇರಲಿ, ಕರ್ನಾಟಕ ಇರಲಿ, ಒಟ್ಟಾರೆ ನಮ್ಮ ಪೋಲಿಸರು ಕಾರ್ಯದಕ್ಷತೆಯಿಂದ ಕೂಡಿದವರು ಎಂಬ ಸಂದೇಶ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೋಗುತ್ತಿರಲಿಲ್ಲ. ರಾಷ್ಟ್ರಮಟ್ಟದ ಹೆಚ್ಚಿನ ಸುದ್ಧಿವಾಹಿನಿಗಳು ಪ್ರಥ್ವಿರಾಜ್ ಸೆರೆಹಿಡಿದ ವೀಡಿಯೋವನ್ನು ಬಿತ್ತರಿಸಿ ಕರ್ನಾಟಕ ಪೋಲಿಸ್ ಇಲಾಖೆಗೆ ಶಹಬ್ಬಾಸ್ ಎಂದಿವೆ. ಉನ್ನತ ಪೋಲಿಸ್ ಅಧಿಕಾರಿಗಳು ಪ್ರಥ್ವಿರಾಜ್ ಅವರು ಸೆರೆಹಿಡಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವೈಯುಕ್ತಿಕವಾಗಿ ಪತ್ರಕರ್ತನೊಬ್ಬನಿಗೆ ತನ್ನ ಕೆಲಸವನ್ನು ಸುಂದರವಾಗಿ ನಿಭಾಯಿಸಿದ ತೃಪ್ತಿ ಮಾತ್ರ. ಆದರೆ ಪ್ರಥ್ವಿರಾಜ್ ಕೈಯಲ್ಲಿ ಕ್ಯಾಮರಾ ಹಿಡಿದು ಜೀವದ ಹಂಗು ತೊರೆದು ಅಪಾಯಕಾರಿ ಎಂದೆನಿಸಿದ ಚೇಸಿಂಗ್ ಗೆ ತನ್ನನ್ನು ತಾನೇ ಬಗ್ಗಿಸಿಕೊಂಡದ್ದು ಮಾತ್ರ ಇಡೀ ಸಮಾಜವು ಚಪ್ಪಾಳೆ ಹೊಡೆಯುವಂತದ್ದು, ಗುರುತಿಸುವಂತದ್ದು. ಆದರೆ ಘಟನೆ ರಾಷ್ಟ್ರಾದ್ಯಂತ ವಿಶೇಷ ಸುದ್ಧಿಯಲ್ಲಿರುವಾಗಲೂ ಪ್ರಥ್ವಿರಾಜ್ ಸಾಹಸ ಮಾತ್ರ ಮರೆಯಲ್ಲೇ ಬಾಕಿಯಾಗಿದೆ. ಪತ್ರಕರ್ತನೋರ್ವನ ಸಾಧನೆ ಗುರುತಿಸಲ್ಪಡದೆ ಹೋಗಿದೆ.
ಬರಹ : Stany Bela ಅವರ ಫೇಸ್ ಬುಕ್ ಗೋಡೆಯಿಂದ
Discussion about this post