
ನವದೆಹಲಿ : ಪದ್ಮಶ್ರೀ ಪ್ರಶಸ್ತಿ ವಿತರಣೆ ಸಮಾರಂಭ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿತು. ಮಂಗಳವಾರ 2011ನೇ ಸಾಲಿನ ಪದ್ಮ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು. ಮಂಗಳಮುಖಿಯಾಗಿ ದೇಶವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಜಾನಪದ ನೃತ್ಯ ಕಲಾವಿದೆ ಮಂಜಮ್ಮ ಜೋಗತಿ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಸ್ವೀಕರಿಸಿದರು.

ಈ ವೇಳೆ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಹತ್ತಿದ ಮಂಜಮ್ಮ ತಮ್ಮದೇ ಶೈಲಿಯಲ್ಲಿ ದೇಶದ ಪ್ರಥಮ ಪ್ರಜೆಯ ದೃಷ್ಟಿ ತೆಗೆದರು. ಈ ವೇಳೆ ಮಂಜಮ್ಮ ದಿಢೀರ್ ಎಂದು ಸೆರಗು ಬೀಸುವುದನ್ನು ಕಂಡ ರಾಷ್ಟ್ರಪತಿಗಳು ಕೂಡಾ ಗಾಬರಿಯಾದರು. ತಕ್ಷಣ ಸುಧಾರಿಸಿಕೊಂಡ ಅವರು ದೃಷ್ಟಿ ತೆಗೆಸಿಕೊಂಡು ಧನ್ಯವಾದಗಳನ್ನು ಅರ್ಪಿಸಿ, ಪ್ರಶಸ್ತಿ ವಿತರಿಸಿದರು. ಈ ವೇಳೆ ಮಂಜಮ್ಮ ಅವರ ನಡೆಯಿಂದ ರಾಷ್ಟ್ರಪತಿಗಳ ಭದ್ರತಾ ಪಡೆ ಆತಂಕಕ್ಕೆ ಒಳಗಾಗಿತ್ತು. ಶಿಷ್ಟಾಚಾರದಲ್ಲಿ ಇದಕ್ಕೆ ಅವಕಾಶವಿಲ್ಲದ ಕಾರಣ ಇದೇನಿದು ಅನ್ನುವುದು ಅವರ ಪ್ರಶ್ನೆಯಾಗಿತ್ತು. ಆದರೆ ಭದ್ರತೆಗೆ ಆತಂಕವಿಲ್ಲದ ಕಾರಣ ಅವರೇನೂ ತಡೆಯಲಿಲ್ಲ.

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಹಿರಿಯ ರಂಗ ಕಲಾವಿದೆಯಾಗಿರುವ ಮಂಜಮ್ಮ, ಮಂಗಳಮುಖಿಯಾಗಿ ಅನುಭವಿಸಿದ ನೋವು ಕಡಿಮೆ ಇಲ್ಲ. ಆದರೆ ಇದೇ ನೋವು ಅವರನ್ನು ಪದ್ಮಶ್ರೀ ಪ್ರಶಸ್ತಿಯ ತನಕ ಬೆಳೆಸಿದೆ. ಚಿಕ್ಕ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, ಜನಪದ ನೃತ್ಯದ ಮೂಲಕ ಜಾತ್ರೆ, ಸಂತೆ, ಎಂದು ಸುತ್ತಿದ ಅವರು ರಂಗವನ್ನು ಶ್ರೀಮಂತವಾಗಿಸಿದ್ದಾರೆ..

ಜೋಗತಿ ಕಲೆ, , ನಾಟಕ, ನಿರ್ದೇಶನ, ಹಾಡು, ಕುಣಿತ ಹೀಗೆ ಅನೇಕ ಪ್ರತಿಭೆಗಳ ಆಗರ ಮಂಜಮ್ಮ ಕರ್ನಾಟಕ ಜಾನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Discussion about this post