ಮಾಮೂಲಿ ಪಡೆಯುವುದಕ್ಕೆ ಬ್ರೇಕ್ ಬಿದ್ರೆ ಎಲ್ಲವೂ ಸರಿಯಾಗುತ್ತದೆ. ಬೆಂಗಳೂರಿನ ಅದೆಷ್ಟು ಹೊಟೇಲ್ ಗಳು ಫುಟ್ ಪಾತ್ ನಲ್ಲಿ ಗ್ರಾಹಕರ ವಾಹನ ಪಾರ್ಕ್ ಮಾಡಿಸುತ್ತಿಲ್ಲ. ಇದೇನು ಟ್ರಾಫಿಕ್ ಪೊಲೀಸರಿಗೆ ಗೊತ್ತಿಲ್ವ.
ಬೆಂಗಳೂರು : ತಾವು ಆಡಿದ್ದೇ ಆಟ ಅನ್ನುವಂತೆ ಬೆಂಗಳೂರು ಟ್ರಾಫಿಕ್ ವಿಭಾಗದ ಕೆಲ ಪೊಲೀಸರು ವರ್ತಿಸುತ್ತಿದ್ದರು. ಅದರಲ್ಲೂ ವಾಹನ ಟೋಯಿಂಗ್ ಮಾಡುವ ಟೈಗರ್ ನಲ್ಲಿರುವ ಸಿಬ್ಬಂದಿ ಕಥೆ ಕೇಳುವುದೇ ಬೇಡ. ಅದ್ಯಾವ ರೌಡಿಗಳಿಗೂ ಅವರು ಕಡಿಮೆ ಇರಲಿಲ್ಲ. ಇನ್ನು ಅದರಲ್ಲಿ ವಿರಾಜಮಾನರಾಗಿರುತ್ತಿದ್ದ ಪೊಲೀಸ್ ಅಧಿಕಾರಿಯ ದರ್ಪ ದೌಲತ್ತುಗಳಿಗೆ ಕಡಿಮೆ ಇರಲಿಲ್ಲ. ಮಾನವೀಯತೆ ಅನ್ನುವುದು ಇಲ್ಲದಿದ್ದರೂ ಕಾನೂನು ಜ್ಞಾನವಂತು ಇರಲೇ ಇಲ್ಲ. ನಿಯಮ ಉಲ್ಲಂಘಿಸಿ ವಾಹನ ಟೋಯಿಂಗ್ ಮಾಡುವುದೇ ಅವರ ಕಾಯಕವಾಗಿತ್ತು.
ಹೀಗೆ ಟೋಯಿಂಗ್ ವಾಹನದ ಆಟಾಟೋಪ ಮಿತಿ ಮೀರಿದ ಹಿನ್ನಲೆಯಲ್ಲಿ ಬೆಂಗಳೂರಿನ ನಾಗರಿಕರು ಬೇಸತ್ತು ಹೋಗಿದ್ದರು. ಟ್ರಾಫಿಕ್ ಪೊಲೀಸರ ವರ್ತನೆ ಬಗ್ಗೆ ಜನ ಬೀದಿಗಿಳಿಯುವುದೊಂದು ಬಾಕಿ ಅನ್ನುವುದನ್ನು ಅರಿತ ಸಿಎಂ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ವಚ್ಛ ಮತ್ತು ಪಾರದರ್ಶಕ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವಂತೆ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಟೋಯಿಂಗ್ ಕಾರ್ಯಾಚರಣೆ ಬಗ್ಗೆ ಕಣ್ಣು ತೆರೆದಿರುವ ಗೃಹ ಸಚಿವರು ಹೊಸ ಮತ್ತು ಸರಳೀಕೃತ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರುವ ತನಕ ಟೋಯಿಂಗ್ ಕಾರ್ಯಾಚರಣೆಗೆ ಬ್ರೇಕ್ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, 15 ದಿನಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲಿ ತನಕ ಟೋಯಿಂಗ್ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಹಾಗಂತ ನೋ ಪಾರ್ಕಿಂಗ್ ಜಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವಂತಿಲ್ಲ. ಹೀಗೆ ನಿಲ್ಲಿಸಿದ್ರೆ ಪೊಲೀಸರು ದಂಡ ವಿಧಿಸಲಿದ್ದಾರೆ ಅಂದಿದ್ದಾರೆ.
ಹಾಗೇ ನೋಡಿದರೆ ಟೋಯಿಂಗ್ ಸಮಸ್ಯೆಯನ್ನು ಬಗೆ ಹರಿಸುವುದು ಬ್ರಹ್ಮ ವಿದ್ಯೆಯಲ್ಲ, ಟೋಯಿಂಗ್ ಮಾಡುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳೇನು ಅನ್ನುವುದನ್ನು ಈಗಾಗಲೇ ಸ್ಪಷ್ಟವಾಗಿ ಹೇಳಲಾಗಿದೆ. ಈ ನಿಯಮಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಿದ್ರೆ ಎಲ್ಲವೂ ಸರಿಯಾಗುತ್ತದೆ. ಜೊತೆಗೆ ನೋ ಪಾರ್ಕಿಂಗ್ ಜಾಗಗಳಲ್ಲಿ ಜನರಿಗೆ ಕಾಣುವಂತೆ ಬೋರ್ಡ್ ಗಳನ್ನು ಅಳವಡಿಸುವುದು, ಪಾರ್ಕಿಂಗ್ ಗೆ ಜಾಗ ನೀಡದ ವಾಣಿಜ್ಯ ಮತ್ತು ವಾಸ್ತವ್ಯ ಕಟ್ಟಡಗಳ ಬಾಗಿಲು ಮುಚ್ಚಿಸುವುದು ಮತ್ತು ರಸ್ತೆ ಬದಿ ಅಂಗಡಿಗಳಿಂದ ಮಾಮೂಲಿ ಪಡೆಯುವುದನ್ನು ನಿಲ್ಲಿಸಿದ್ರೆ ಈ ಸಮಸ್ಯೆಯೇ ಇರೋದಿಲ್ಲ.
Discussion about this post