ಸ್ವಚ್ಛತೆ ಪಾಠ ಹೇಳಲು ಹೋಗಿ ಪ್ರಾಣವೇ ಹೋಯ್ತಲ್ಲ : ಆರೋಪಿಯನ್ನು ಬಂಧಿಸಿದ ಪೊಲೀಸರು
ಎಲ್ಲೆಂದರಲ್ಲಿ ಗುಟ್ಕಾ ಉಗಿಯಬೇಡ, ಮನಸ್ಸಿಗೆ ತೋಚಿದ ಕಸ ಎಸೆಯಬೇಡ ಎಂದು ಬುದ್ದಿ ಮಾತು ಹೇಳಿದ ವೃದ್ಧನನ್ನೇ ಯುವಕನೊಬ್ಬ ಕೊಂದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು 70 ವರ್ಷದ ಸಿದ್ದಪ್ಪ ಎಂದು ಗುರುತಿಸಲಾಗಿದೆ. ಆರೋಪಿಯನ್ನು ತುಮಕೂರು ಜಿಲ್ಲೆ ಶಿರಾ ಮೂಲದ ಪುನೀತ್ (24) ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ
ಬಂಧಿತ ಆರೋಪಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಕಸದ ತುಂಬಿದ ಕವರ್ ಅನ್ನು ರಸ್ತೆಯಲ್ಲೇ ಎಸೆದು, ಗುಟ್ಕಾ ತಿಂದು ರಸ್ತೆಯಲ್ಲೇ ಉಗಿಯುತ್ತಿದ್ದ, ಇದನ್ನು ಕಂಡ ಸಿದ್ದಪ್ಪ ಅವರು ಯುವಕನಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ. ಅಷ್ಟೇಕ್ಕೆ ಕುಪಿತನಾದ ಪುನೀತ್ ಮನೆಯಿಂದ ಮಚ್ಚು ತಂದು ವೃದ್ಧನ ಕುತ್ತಿಗೆ ಕಡಿದಿದ್ದಾನೆ.
ಕೃತ್ಯದ ಬಳಿಕ ಮತ್ತೆ ಮನೆಗೆ ತೆರಳಿ ತಾಯಿಯ ಜೊತೆಗೆ ಚಿಕ್ಕಬಿದರ ಕಲ್ಲಿನಲ್ಲಿ ಇರೋ ತನ್ನ ಅಣ್ಣನ ಮನೆಗೆ ತೆರಳಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ಮನೆ ಬಾಗಿಲು ಬಡಿದ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿ ಮುದ್ದೆ ಮುರಿಯೋ ಕೆಲಸ ಫಿಕ್ಸ್ ಅಂದಿದ್ದಾರೆ.
ಸಿದ್ದಪ್ಪ ಅವರು ಹಿಮಾಲಯ ಡ್ರಗ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 10 ವರ್ಷದ ಹಿಂದೆ ನಿವೃತ್ತಿ ಪಡೆದ ಇವರು ತಮ್ಮ ಬಳಿಯಿದ್ದ 10 ರಿಂದ 15 ಮನೆಗಳನ್ನು ಬಾಡಿಗೆಗೆ ಕೊಟ್ಟು ನಿವೃತ್ತಿ ಜೀವನ ನಡೆಸುತ್ತಿದ್ದರು. ಸ್ವಚ್ಛತೆ ವಿಷಯದಲ್ಲಿ ಬಾಡಿಗೆದಾರರ ಜೊತೆಗೆ ತಕರಾರು ಬಿಟ್ಟರೆ ಮತ್ಯಾವುದೇ ಗಲಾಟೆ ಮಾಡಿದವರಲ್ಲ ಸಿದ್ದಪ್ಪ.
ಆರೋಪಿ ಪುನೀತ್ ಕುಟುಂಬ ಸಿದ್ದಪ್ಪ ಅವಕ ಕಟ್ಟಡದಲ್ಲೇ ಬಾಡಿಗೆಗೆ ಇತ್ತು ಅನ್ನಲಾಗಿದೆ.