ನವದೆಹಲಿ : ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆ ಆರ್ ಎಸ್ ಆಣೆಕಟ್ಟಿಗೆ ಆಗಬಹುದಾದ ಹಾನಿಯನ್ನು ತಡೆಯುವಂತೆ ಆಗ್ರಹಿಸಿ ಸಂಸದೆ ಸುಮಲತಾ ಅಂಬರೀಶ್ ನಡೆಸುತ್ತಿರುವ ಹೋರಾಟ ದೆಹಲಿಗೆ ತಲುಪಿದೆ. ಮೊನ್ನೆಯಷ್ಟೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಡ್ಯಾಂ ರಕ್ಷಿಸುವಂತೆ ಮನವಿ ಪತ್ರ ಸಲ್ಲಿಸಿದ್ದರು.
ಹಾಗಂತ ಅವರು ಹೋರಾಟವನ್ನು ಅಲ್ಲಿಗೆ ನಿಲ್ಲಿಸಿಲ್ಲ, ಸುಮಲತಾ ಅವರ ನಡೆ ನೋಡಿದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಪತ್ರ ಕೊಟ್ಟರೂ ಅಚ್ಚರಿ ಇಲ್ಲ
ಈ ನಡುವೆ ನಿನ್ನೆ ಲೋಕಸಭಾ ಸ್ಪೀಕರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿರುವ ಸುಮಲತಾ ಕಟ್ಟೆ ರಕ್ಷಿಸಿ ಎಂದು ಮನವಿ ಸಲ್ಲಿಸಿದ್ದಾರೆ.
- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕೊಟ್ಟ ಪತ್ರದ ಸಾರಾಂಶ
ಕೆ.ಆರ್.ಎಸ್ ಆಣೆಕಟ್ಟು ಕರ್ನಾಟಕ ಜನತೆಗೆ ಮೈಸೂರು ಮಹಾರಾಜರ ಕೊಡುಗೆ. ಅದಕ್ಕೆ ಐತಿಹಾಸಿಕ ಮಹತ್ವ ಇದೆ. ಕೋಟ್ಯಾಂತರ ಜನರ ಅನ್ನ ನೀರಿಗೆ ಅದುವೇ ಜೀವನಾಡಿ. ಅನೇಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪೋಟಕಗಳ ಬಳಕೆಯಿಂದ ಡ್ಯಾಮ್ ಕಟ್ಟಡಕ್ಕೆ ಹಾನಿಯಾಗುತ್ತಿರುವ ವಿಷಯವನ್ನು ಸುಪ್ರೀಮ್ ಕೋರ್ಟ್ ಕೂಡ ಪ್ರಸ್ತಾಪಿಸಿದೆ.
ನಿಮ್ಮ ಗಮನಕ್ಕೆ ತರಬೇಕಾದ ಮತ್ತೊಂದು ವಿಷಯವೆಂದರೆ, ಅಕ್ರಮ ಗಣಿಗಾರಿಕೆ ಮಾಡುವವರು ಸರ್ಕಾರಕ್ಕೆ ಉಳಿಸಿಕೊಂಡಿರುವ ರಾಜಧನ ಮತ್ತು ದಂಡದ ಬಾಬ್ತು. ಅಧಿಕಾರಿಗಳು, ರಾಜಕಾರಣಿಗಳು ಮುಂತಾದವರ ಬೆಂಬಲವಿಲ್ಲದೆ ಅಕ್ರಮ ಗಣಿಗಾರಿಕೆ ಮುಂದುವರಿಸುವುದು ಅಸಾಧ್ಯ.
ಸತ್ಯಾಸತ್ಯತೆಯನ್ನು ತಿಳಿಯಲು ಮತ್ತು ಅಕ್ರಮ ಗಣಿಗಾರಿಕೆಯ ವ್ಯಾಪಕತೆ ಕಂಡುಹಿಡಿಯಲು ಡ್ರೋನ್ ಸರ್ವೇ ಮಾಡಲು ಮನವಿ ಮಾಡುತ್ತೇನೆ.ಅಕ್ರಮ ಗಣಿಗಾರಿಕೆಯ ವಿರುದ್ಧ ಕಠಿಣವಾದ ನಿಲುವನ್ನು ತಳೆದು, ಸರ್ಕಾರಕ್ಕೆ ಸಲ್ಲಬೇಕಾದ ಎಲ್ಲಾ ಬಾಬ್ತು ವಸೂಲಿಗೆ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡುತ್ತೇನೆ. ಜನರಿಗೆ, ಅಣೆಕಟ್ಟೆಗೆ ತೊಂದರೆ ಉಂಟುಮಾಡುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಲು ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆ.”
*ಸನ್ಮಾನ್ಯ ಲೋಕಸಭಾ ಸ್ಪೀಕರ್ ಶ್ರೀ. ಓಂ ಬಿರ್ಲಾ ಅವರಿಗೆ ಕೊಟ್ಟ ಪತ್ರದ ಸಾರಾಂಶ*
“ಸುಪ್ರೀಂ ಕೋರ್ಟ್ ಸೂಚನೆಯ ಹೊರತಾಗಿಯೂ ಕೆ.ಆರ್.ಎಸ್ ಅನೇಕಟ್ಟೆಯ ಸುತ್ತಮುತ್ತ ಅಕ್ರಮ ಗಣಿಗಾರಿಗೆಯ ಚಟುವಟಿಕೆಗಳು ಮುಂದುವರೆದಿದೆ.
ಅಲ್ಲಿನ ಸ್ಥಳೀಯ ಜನರು, ರೈತರು ಇದರ ಬಗ್ಗೆ ನನಗೆ ಸಾಕಷ್ಟು ದೂರು ಕೊಟ್ಟಿದ್ದಾರೆ. ಅವರು ಹೇಳುವಂತೆ, ಸ್ಪೋಟಕಗಳ ಬಳಕೆಯಿಂದ ಅಣೆಕಟ್ಟೆಯಲ್ಲಿ ಬಿರುಕು ಬಿಡುವ ಅಪಾಯವಿದೆ. ಗಣಿಗಾರಿಕೆಯಿಂದ ಪರಿಸರದ ಮೇಲೆ ಸಾಕಷ್ಟು ಹಾನಿಯಾಗಿ, ಮನುಷ್ಯರು ಮತ್ತು ಜಾನುವಾರುಗಳಿಗೆ ತೊಂದರೆಯಾಗಿದೆ. ಗರ್ಭಪಾತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ.
ರಂಗನತಿಟ್ಟು ಪಕ್ಷಿಧಾಮ ಮುಂತಾದ ಕಡೆ ವನ್ಯಜೀವಿಗಳಿಗೂ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ. ಕುಡಿಯುವ ನೀರು ಕಲುಷಿತವಾಗಿದೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದಲ್ಲದೆ ಸುತ್ತಲಿನ ಹಳ್ಳಿಗಳಲ್ಲಿ ಮನೆಗಳಿಗೆ ದಕ್ಕೆಯಾಗಿದೆ. ಇದೆಲ್ಲದರಿಂದ ಬೇಸತ್ತ ಹಳ್ಳಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈ ಎಲ್ಲಾ ಸನ್ನಿವೇಶದಲ್ಲಿ ನೀವು ಸಿ.ಬಿ.ಐ ರೀತಿಯ ಯಾವುದಾದರೂ ಕೇಂದ್ರೀಯ ತನಿಖಾ ತಂಡದಿಂದ ಕೂಲಂಕುಷವಾಗಿ ತನಿಖೆಗೆ ಆದೇಶಿಸಬೇಕೆಂದು ಕೋರುತ್ತೇನೆ. ಇದು ಕೋಟ್ಯಾಂತರ ಜನರ ಜೇವನ ಮತ್ತು ಜೀವನೋಪಾಯದ ಪ್ರಶ್ನೆಯಾಗಿದೆ.” ಇನ್ನು ಲೋಕಸಭಾ ಅಧಿವೇಶನ ಮುಗಿಯುವಷ್ಟು ಹೊತ್ತಿಗೆ ಮತ್ತಷ್ಟು ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
Discussion about this post