ಬೆಂಗಳೂರು : ಕೊರೋನಾ ಆತಂಕದ ನಡುವೆ ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ ಪ್ರಾರಂಭವಾಗುತ್ತಿದೆ. ಮೊದಲ ದಿನ ಅಂದ್ರೆ ನಾಳೆ ಗಣಿತ, ವಿಜ್ಞಾನ, ಸಮಾಜ ವಿಷಯಗಳ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30 ಪರೀಕ್ಷೆ ಪ್ರಾರಂಭವಾಗಲಿದ್ದು ಮಧ್ಯಾಹ್ನ 1.30ಕ್ಕೆ ಅಂತ್ಯಗೊಳ್ಳುತ್ತದೆ.
ಈ ಬಾರಿ ಒಟ್ಟು 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದು ಇದರಲ್ಲಿ 4,72,643 ಬಾಲಕರು ಮತ್ತು 40,39,38 ಬಾಲಕಿಯರು ಸೇರಿದ್ದಾರೆ.
ಇದರಲ್ಲಿ 7,83,955 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, 977 ಪುನರಾವರ್ತಿತ ವಿದ್ಯಾರ್ಥಿಗಳು, 21,817 ಖಾಸಗಿ ವಿದ್ಯಾರ್ಥಿಗಳು, 9,419 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು, 392 ಹೊಸ ಸ್ಕೀಂ ವಿದ್ಯಾರ್ಥಿಗಳು ಮತ್ತು 21 ಹೊಸ ಸ್ಕೀಂ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಗೆ 14,927 ಶಾಲೆಗಳನ್ನು ನೋಂದಾಯಿಸಲಾಗಿದೆ. 4,884 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟು 73,066 ಪರೀಕ್ಷಾ ಕೊಠಡಿಗಳಿದ್ದು, ಪರೀಕ್ಷಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ 4,884 ಮುಖ್ಯ ಅಧೀಕ್ಷಕರು, 4,884 ಪ್ರಶ್ನೆಪತ್ರಿಕೆ ಅಭಿರಕ್ಷಕರು, 80,389 ಕೊಠಡಿ ಮೇಲ್ವಿಚಾರಕರು, 4,884 ಸ್ಥಾನಿಕ ಜಾಗೃತ ದಳದವರನ್ನು ನೇಮಿಸಿಲಾಗಿದೆ.
ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಹಾಗೂ ಪರೀಕ್ಷೆ ಮುಕ್ತಾಯದ ಬಳಿಕ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವಂತೆ ಸೂಚಿಸಲಾಗಿದ್ದು, ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ಕೆಮ್ಮು, ನೆಗಡಿ, ಜ್ವರ ಇರುವ ಮಕ್ಕಳನ್ನು ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತದೆ.
ಇನ್ನು ರಾಜ್ಯದ ಮಲೆನಾಡು, ಕರಾವಳಿ ಸೇರಿ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದೆ. ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಈಗಾಗಲೇ ಹವಮಾನ ಇಲಾಖೆ ಹೇಳಿದ್ದು, ಜುಲೈ 21ರ ತನಕ ಮಳೆ ಅಬ್ಬರಿಸಲಿದೆ. ಹೀಗಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳುವಾಗ ಮಕ್ಕಳು ಜಾಗ್ರತೆಯಿಂದ ಹೋಗುವಂತೆ ನೋಡಿಕೊಳ್ಳಬೇಕಿದೆ.
Discussion about this post