ಬೆಂಗಳೂರು : ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಮಂದಿಗೆ ಸಹಾಯ ಹಸ್ತ ಚಾಚಬೇಕಾಗಿರುವಲ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಅದೇನು ತರಾತುರಿಯೋ ಗೊತ್ತಿಲ್ಲ. ಸೂಕ್ಷ್ಮ ವ್ಯಕ್ತಿ ಎಂದೇ ಕರೆಸಿಕೊಂಡಿರುವ ಶಿಕ್ಷಣ ಸಚಿವರ ಸುರೇಶ್ ಕುಮಾರ್ ಅವರೇ ಎಡವಟ್ಟು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪೋಷಕರ ಅಭಿಪ್ರಾಯ ಪಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ, ಅದರೊಂದಿಗೆ ಶಾಲೆ ಪ್ರಾರಂಭದ ವೇಳಾ ಪಟ್ಟಿಯನ್ನೂ ಸಿದ್ದಪಡಿಸಿರುವುದು ಯಾಕೆ ಅನ್ನುವುದು ಈಗಿರುವ ಪ್ರಶ್ನೆ. ಶಾಲೆ ಪ್ರಾರಂಭಿಸಲು ದಿನಾಂಕಗಳನ್ನು ಪ್ರಸ್ತಾಪಿಸಿರುವುದನ್ನು ನೋಡಿ, ಇದೊಂದು ಟೆಸ್ಟ್ ಡೋಸ್ ಅನ್ನುವಂತೆ ಕಾಣಿಸುತ್ತಿದೆ. ರಿಯಾಕ್ಷನ್ ನೋಡಿಕೊಂಡು ಮುಂದುವರಿಯುವುದು.
ರಾಜ್ಯದಲ್ಲಿ ಶಾಲೆ ಪ್ರಾರಂಭಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಶಾಲೆ ತೆರೆದ ವಿದೇಶಗಳ ಪರಿಸ್ಥಿತಿ ಅರ್ಥ ಮಾಡಿಕೊಂಡ್ರೆ ಯಾರು ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ.
ಬ್ರಿಟನ್, ಫ್ರಾನ್ಸ್, ಇಸ್ರೇಲ್ ಹಾಗೂ ಹಲವು ರಾಷ್ಟ್ರಗಳಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಸೋಂಕು ತಗುಲಿದೆ.
ಬ್ರಿಟನ್ ಡರ್ಬಿಯ ಪ್ರಾಥಮಿಕ ಶಾಲೆಯೊಂದರ ಏಳು ಮಂದಿ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಬ್ರಿಟನ್ ನ ಶಾಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶಿಸಲಾಗಿದೆ.
ಇನ್ನು ಫ್ರಾನ್ಸ್ ನಲ್ಲೂ ಕಳೆದ ವಾರ ಶಾಲೆಗಳು ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ವಿವಿಧ ಶಾಲೆಗಳ 70 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇಸ್ರೇಲ್ ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ಹೀಗೆ ವಿವಿಧ ದೇಶ ಇತ್ತೀಚಿನ ಪತ್ರಿಕೆಗಳನ್ನು ತೆರೆದು ನೋಡಿದ್ರೆ ಶಾಲೆ ಪ್ರಾರಂಭವಾದ ನಂತರದ ಅನಾಹುತಗಳು ಕಾಣಿಸಿಕೊಳ್ಳುತ್ತಿದೆ.
ಆದರೆ ನಮ್ಮಲ್ಲಿ ಮಾತ್ರ ಅದ್ಯಾವುದು ಲೆಕ್ಕಕ್ಕೇ ಇಲ್ಲ. ಶಾಲೆ ತೆರೆಯಬೇಕು ಅಷ್ಟೇ.
Discussion about this post