ಬೆಂಗಳೂರು : ಕೊರೋನಾ ನಿಯಂತ್ರಿಸುವಲ್ಲಿ ಎಡವಿದ ರಾಜ್ಯ ಯಾವುದು ಎಂದು ಯಾರಾದರೂ ಕೇಳಿದರೆ ಕರ್ನಾಟಕ ಅನ್ನುವ ಹೆಸರು ಮೊದಲಿಗೆ ಬರುತ್ತದೆ.ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಯಡವಟ್ಟಿನ ನಿರ್ಧಾರದಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿದೆ. ಕೊರೋನಾ ಸೋಂಕಿನ ಎರಡನೆ ಅಲೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುತ್ತೇವೆ ಅನ್ನುವ ಸರ್ಕಾರ ಇಂದಿಗೂ ಕಠಿಣ ನಿಯಮಗಳನ್ನು ಜಾರಿ ಮಾಡಿಲ್ಲ. ಕೇಳಿದರೆ ಮಹಾರಾಷ್ಟ್ರ, ದೆಹಲಿಯ ಪರಿಸ್ಥಿತಿ ನಮ್ಮಲ್ಲಿ ಅನ್ನುವ ಉತ್ತರ ಸಾಮ್ರಾಟರಿಂದ ಸಿಗುತ್ತದೆ.
ಆದರೆ ಸುದ್ದಿವಾಹಿನಿಗಳ ವರದಿಗಳನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಬೆಡ್ ಗಳಿಲ್ಲದೆ ಕೊರೋನಾ ಸೋಂಕಿತರು ಪ್ರಾಣ ಬಿಡುತ್ತಿದ್ದಾರೆ. ಪ್ರಾಣವಾಯುವಿಲ್ಲದೆ ಅದೆಷ್ಟೋ ಸೋಂಕಿತರ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ರಾಜ್ಯ ಸರ್ಕಾರ ಮಾತ್ರ ಕರ್ನಾಟಕದಲ್ಲಿ ಎಲ್ಲವೂ ಚೆನ್ನಾಗಿದೆ ಅನ್ನುತ್ತಿದೆ.
ಇಷ್ಟೆಲ್ಲಾ ಸಂಕಷ್ಟಗಳಿದ್ದರೂ ಯಡಿಯೂರಪ್ಪ ಸಂಪುಟ ಸಚಿವರಿಗೆ ಪ್ರಚಾರದ ಹುಚ್ಚು ಬಿಟ್ಟಿಲ್ಲ. ಜನ ಸಂಕಷ್ಟದಲ್ಲಿದ್ದರೂ ನಾವು ಕೊರೋನಾ ಲಸಿಕೆ ಪಡೆಯುವ ಫೋಟೋ ಪೇಪರ್ ನಲ್ಲಿ ಮುದ್ರಣವಾಗಬೇಕು, ವಿಡಿಯೋ ಟಿವಿಯಲ್ಲಿ ಬರಬೇಕು ಅನ್ನುವ ನಿಲುವು ಸಚಿವರದ್ದು.
ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ವಸತಿ ಸಚಿವ ವಿ ಸೋಮಣ್ಣ ಅವರ ಮಾಧ್ಯಮ ಸಮನ್ವಯಾಧಿಕಾರಿ ಕಳುಹಿಸಿರುವ ಆಹ್ವಾನ ಪತ್ರಿಕೆ. ನಾಳೆ ಸಚಿವರು ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆಯುತ್ತಾರಂತೆ, ಅದನ್ನು ಕವರ್ ಮಾಡಲು ಮಾಧ್ಯಮ ಸ್ನೇಹಿತರು ಹೋಗಬೇಕಂತೆ. ಅಲ್ಲಾ ಸಚಿವರು ಎರಡನೇ ಡೋಸ್ ಅಲ್ಲ 3 ಡೋಸ್ ಪಡೆಯಲಿ ಅದನ್ನು ಮಾಧ್ಯಮಗಳ್ಯಾಕೆ ಕವರ್ ಮಾಡಬೇಕು.
ಇಂದು ಲಸಿಕೆ ಪಡೆಯೋದನ್ನ ಮಾಧ್ಯಮಗಳು ಕವರ್ ಮಾಡಬೇಕು, ನಾಳೆ ಮತ್ಯಾವುದನ್ನು ಕವರ್ ಮಾಡಬೇಕು ಎಂದು ಕರೆಯಲ್ಲ ಅಂತಾ ಯಾವ ಗ್ಯಾರಂಟಿ. ಹೀಗೆಲ್ಲಾ ಪ್ರಚಾರ ಪಡೆಯುವ ಬದಲು ಮೊದಲ ಸೋಂಕಿತರ ಸಂಕಷ್ಟಕ್ಕೆ ಸ್ಪಂದಿಸಿ. ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಬ್ರೇಕ್ ಹಾಕಿ, ನಾನ್ ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗೋದಿಲ್ಲ ಇದಕ್ಕೊಂದು ಪರಿಹಾರ ಕಂಡುಕೊಳ್ಳಿ. ಹೀಗೆ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸಿದರೆ ನೀವು ಬೇಡ ಅಂದರೂ ಪ್ರಚಾರ ಸಿಗುತ್ತದೆ.
Discussion about this post