ಬೆಂಗಳೂರು : ಕರ್ನಾಟಕದಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಮಂದಿ ಕೊರೋನಾಗೆ ತುತ್ತಾಗಿರುವ ಬೆನ್ನಲ್ಲೇ ಕೇರಳದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ.
ಮಂಗಳವಾರ ಒಂದೇ ದಿನ 19577 ಮಂದಿಗೆ ಸೋಂಕು ತಗಲಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ದೇವರನಾಡಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಈಗಷ್ಟೇ ಚುನಾವಣೆ ಮುಗಿದಿರುವ ಕಾರಣ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಮೀರಿ ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳಿದೆ.
ಅದರಲ್ಲೂ ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿಯತ್ತ ಮುನ್ನುಗುತ್ತಿದೆ. ಕಾಸರಗೋಡು ಹಾಗೂ ಮಂಗಳೂರಿಗೆ ನೇರ ಸಂಪರ್ಕ ಇರುವ ಕಾರಣ ಸೋಂಕು ವ್ಯಾಪಕವಾಗಿ ಕರಾವಳಿಯಲ್ಲಿ ಹರಡುವ ಸಾಧ್ಯತೆಗಳಿದೆ. ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಹಾಗೂ ಉದ್ಯೋಗ ಸಲುವಾಗಿ ಸಾಕಷ್ಟು ಜನ ಆಗಮಿಸುತ್ತಾರೆ. ಹೀಗಾಗಿ ಕೇರಳದ ಕಾರಣದಿಂದ ಕರ್ನಾಟಕದಲ್ಲಿ ಎರಡನೇ ಅಲೆ ಮತ್ತಷ್ಟು ಪ್ರಬಲವಾಗುವ ಸಾಧ್ಯತೆಗಳಿದೆ.
ಇನ್ನು ಕೇರಳದ ಚುನಾವಣಾ ಪ್ರಚಾರಕ್ಕೆ ಹೋದ ಸಾಕಷ್ಟು ಕನ್ನಡಿಗರು ಈಗಷ್ಟೇ ಹಿಂತಿರುಗುತ್ತಿದ್ದಾರೆ. ಬಂದವರೆಲ್ಲಾ ಕೊರೋನಾ ಪರೀಕ್ಷೆಗೆ ಒಳಗಾಗಿಲ್ಲ, ಅದರಲ್ಲಿ ಅದೆಷ್ಟು ಮಂದಿ ಕೇರಳದಿಂದ ವೈರಸ್ ಹೊತ್ತು ತಂದು ಊರೆಲ್ಲಾ ಹಂಚಿದ್ದಾರೋ ಗೊತ್ತಿಲ್ಲ. ಕಾಸರಗೋಡಿನಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಮಂಗಳೂರು ಬೆಂಗಳೂರಾಗುವ ದಿನಗಳು ದೂರವಿಲ್ಲ. ನಾವೇ ಮಾಡಿಕೊಂಡ ನಿರ್ಲಕ್ಷ್ಯಕ್ಕೆ ನಮ್ಮವರನ್ನೇ ನಾವು ಬಲಿ ಕೊಡಬೇಕಾದ ಪರಿಸ್ಥಿತಿ ಬಂದಿರೋದು ವಿಪರ್ಯಾಸವೇ ಸರಿ.
Discussion about this post