ಮಂಗಳೂರು : ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನಿಸಿಕೊಂಡಿರುವ ಅಲ್ಪಸಂಖ್ಯಾತರ ಮತಗಳು ಇತ್ತೀಚಿನ ದಿನಗಳಲ್ಲಿ PFI ಮತ್ತು SDPI ಪಾಲಾಗುತ್ತಿದೆ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅದು ಸಾಬೀತಾಗಿದ್ದು, ಕರಾವಳಿಯ ಎರಡು ಕಡೆಗಳಲ್ಲಿ ಅಧಿಕಾರ ಪಡೆಯುವಲ್ಲಿಯೂ ಯಶಸ್ವಿಯಾಗಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಅಪಾಯ ಅನ್ನುವುದು ಕೈ ನಾಯಕರಿಗೂ ಗೊತ್ತಿದೆ.
ಹೀಗಾಗಿ ತಮ್ಮ ಸಾಂಪ್ರದಾಯಿಕ ಮತ ಬ್ಯಾಂಕ್ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ದಾಳ ಉರುಳಿಸಿದ್ದಾರೆ.
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಮತ್ತು ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಪಿಎಫ್ಐ ಮತ್ತು ಎಸ್ಡಿಪಿಐನವರು ಬಿಜೆಪಿಯ ಬೆಂಬಲಿಗರು, ಅವರ ಮಾತನ್ನು ನೀವು ಕೇಳಬೇಡಿ ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ಹಾಗೀ ಪಿಎಫ್ಐ ಪಾತ್ರವಿದೆ ಎಂದು ಗೃಹ ಸಚಿವರು ಹಾಗೂ ಸಿಎಂ ಹೇಳುತ್ತಿದ್ದಾರೆ.
ಒಂದು ವೇಳೆ ಇದಕ್ಕೆ ಸಾಕ್ಷಿ ಇದ್ದರೆ ಎರಡೂ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇಧಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಇನ್ನು ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ನಾಯಕರು ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ಬಗ್ಗೆಯೇ ಮಾತನಾಡಿದ್ದು ವಿಶೇಷವಾಗಿತ್ತು.
PFI ಮತ್ತು SDPI ಸಂಘಟನೆಗಳನ್ನು ಬೆಳೆಯಲು ಬಿಟ್ಟರೆ ಬಿಜೆಪಿ ಪರಿವಾರದ ಸಂಘಟನೆಗಳು ಬೆಳೆಯಲು ಪೂರಕ ಅವಕಾಶ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Discussion about this post