ಸುಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ್ ಭಟ್ ನಿದನರಾದ ಆಘಾತಕಾರಿ ವರದಿ ಆವರ ಹಾಗೂ ಯಕ್ಷಗಾನದ ಅಭಿಮಾನಿಗಳಲ್ಲಿ ಶೋಕ ತಂದಿದೆ . ಅಲ್ಪ ಕಾಲದ ಅಸೌಖ್ಯದಿಂದಾಗಿ , ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ಇಂದು ಸಂಜೆ ನಿಧನರಾದ ವರದಿ , ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ತೀವ್ರ ಶೋಕವನ್ನು ತಂದಿದೆ .
1976 ರಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಹಾಗೂ ಜಯಲಕ್ಷ್ಮಿ ದಂಪತಿಗಳ ನಾಲ್ಕನೇ ಸುಪುತ್ರರಾಗಿ ಜನಿಸಿದ ಪ್ರಸಾದರು , ತಮ್ಮ ತಂದೆಯವರಿಂದಲೇ ಭಾಗವತಿಕೆ ಕಲಿತರು . ತಮ್ಮ ತಂದೆಯ ಬಲಿಪ ಶೈಲಿ ಯನ್ನು ಕರಗತ ಮಾಡಿ , ರಾಗ , ತಾಲ ಹಾಗೂ ಲಯದ ಸೂಕ್ಷ್ಮತೆಯನ್ನು ಕರಗತ ಮಾಡಿಕೊಂಡರು . 1996 ರಲ್ಲಿ ತಮ್ಮ 20ನೇ ವಯಸ್ಸಿನಲ್ಲೇ ಕಟೀಲು ಮೇಳ ಸೇರಿ , ಮುಂದೆ ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾದರು . ಶ್ರೀದೇವಿ ಮಹಾತ್ಮೆ , ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ , ಲಲಿತೋಪಖ್ಯಾನ ಸಹಿತ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗಗಳಲ್ಲಿ , ತಮ್ಮ ತಂದೆಯವರಂತೆಯೇ , ಹಿಡಿತ ಸಾಧಿಸಿ ಕಂಠಪಾಟದಿಂದಲೇ ಭಾಗವತಿಕೆ ಮಾಡುವ ಕೌಶಲ್ಯ ಸಾಧಿಸಿದ್ದರು . ಶ್ರಂಗಾರ , ಕರುಣ , ವೀರ , ಶಾಂತ ರಸಗಳ ಬಳಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಸಂಗಗಳ ಯಶಸ್ಸಿಗೆ ಕಾರಣರಾಗಿದ್ದರು . ಕಂಚಿನ ಕಂಠ ಎಂದೇ ಹೇಳಬಹುದಾದ ಪ್ರಸಾದ್ ಬಲಿಪರು ಹಾಡುವ ಏರು ಸ್ವರದ ಪದ್ಯಗಳು ಶ್ರೋತೃಗಳ ಕಿವಿಗಳಲ್ಲಿ ಇನ್ನೂ ಅನುರುಣಿಸುತ್ತಿದೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು .
ಕಪ್ಪು ಮೂರು ಅಥವಾ ಬಿಳಿ ನಾಲ್ಕರ ಶ್ರುತಿಯಲ್ಲಿ ಹಾಡುವ ಪ್ರಸಾದರ ಭಾಗವತಿಕೆ ಆಸ್ವಾದಿಸುವುದೆಂದರೆ ಅದೊಂದು ಕರ್ಣಾನಂದಕರ . ಪೌರಾಣಿಕ ಕಥೆ , ಪ್ರಸಂಗದ ನಡೆ , ರಂಗ ಪ್ರಯೋಗಗಳ ಬಗ್ಗೆ ಅಪಾರ ಜ್ಞಾನ ಹೊಂದಿ , ಸಹ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು . ಸರಳ , ಸಜ್ಜನಿಕೆಯ ವ್ಯಕ್ತಿತ್ವದ ಪ್ರಸಾದರು , ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದರು . ಮಳೆಗಾಲದ ಯಕ್ಷಗಾನ ಪ್ರದರ್ಶನ , ನಾಟ್ಯ ವೈಭವಗಳ ಪ್ರದರ್ಶನಗಳಿಗೆ ಅತೀ ಬೇಡಿಕೆಯ ಭಾಗವತರಾಗಿದ್ದರು . ಯಕ್ಷಗಾನದ ಹಾಡುಗಳಿಗೆ ಛಂದಸ್ಸೇ ಪ್ರಧಾನ ಎಂಬ ಮನೋಭಾವದ ಪ್ರಸಾದರು , ತಮ್ಮ ತಂದೆಯಂತೆಯೇ , ಪ್ರಸಂಗದ ಹಾಡುಗಳ ಪದ ಛೇದ ಮಾಡದೇ , ಛಂದೋಬದ್ಧವಾಗಿಯೇ ಹಾಡಬೇಕು ಎಂದು ಸಾಧಿಸಿ ತೋರಿಸಿದ ಅಪ್ರತಿಮ ಭಾಗವತೋತ್ತಮರು .
ಪರಂಪರೆಯ ಭಾಗವತಿಕೆ ಎಂದರೆ , ಅದೊಂದು ತಪಸ್ಸು , ಸಾಧನೆ ಎಂದು ನಿಷ್ಠವಾಗಿ ಅಳವಡಿಸಿದ ಸಾಧಕರು . ಯಕ್ಷಗಾನದ ಹೆಸರಿನಲ್ಲಿ ಆಧುನಿಕ ಎಂದು ಹೆಸರಿಸಬಹುದಾದ ಪ್ರಕ್ರಿಯೆಗಳಿಗೆ ತಲೆ ಬಾಗದ ಶ್ರೇಷ್ಠ ಭಾಗವತರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಮುಂಜಾವದ ಕಾಲದಲ್ಲಿ ಕರ್ಣಾರ್ಜುನ ಕಾಳಗ ಪ್ರಸಂಗದ ಪ್ರದರ್ಶನ ಇತ್ತು . ಪ್ರಸಾದ್ ಬಲಿಪರು ಭಾಗವತಿಕೆಗೆ ಕುಳಿತು ಇತ್ತಲಾ ಕರ್ಣಾರ್ಜುನರಿಗೆ ಹತ್ತಿತು ಕಾಳಗ ಎಂಬ ಪದ್ಯ ಹಾಡಿದಾಗ , ನನಗೆ , ಪುರಭವನವೇ ಬಿರಿಯಿತೋ ಎಂಬ ಭಾಸವಾಗಿತ್ತು . ಅಂತಹ ಏರುಕಂಠ ಪ್ರಸಾದ್ ಬಲಿಪರದ್ದಾಗಿತ್ತು .
25 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಪ್ರಸಾದ್ ಬಲಿಪರು ಕಳೆದ ವರ್ಷದ ತಿರುಗಾಟದ ನಂತರ ವಿಧಿಯ ಕ್ರೂರ ದೃಷ್ಟಿಯಿಂದಾಗಿ ಅಸೌಖ್ಯಕ್ಕೆ ಒಳಗಾಗಿ , ಈ ವರ್ಷದ ತಿರುಗಾಟ ಮಾಡಿರಲಿಲ್ಲ .
ಆದರೂ , ಕಟೀಲಿನಲ್ಲಿ ಕಳೆದ ಅಷ್ಟಮಿಯ ಯಕ್ಷಗಾನದ ಪ್ರದರ್ಶನಕ್ಕೆ ಸ್ವಲ್ಪ ಭಾಗವತಿಕೆ ಹಾಗೂ ಮೊನ್ನೆಯ ದಸರಾ ಸಂದರ್ಭದಲ್ಲಿ ಮೂಡಬಿದಿರೆಯ ಶ್ರೀ ಮಹಾಮ್ಮಾಯೀ ದೇವಸ್ಥಾನದಲ್ಲಿ ಮೂರ್ನಾಲ್ಕು ಭಜನೆಗಳನ್ನು ಹಾಡಿ , ಚೇತರಿಸುವ ಲಕ್ಷಣ ತೋರಿದ್ದುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು . ದೇಶ ವಿದೇಶಗಳಲ್ಲೂ ತಮ್ಮ ಭಾಗವತಿಕೆಯ ಕಂಪನ್ನು ಹರಡಿಸಿದ ಪ್ರಸಾದ್ ಬಲಿಪರು ನೂರಾರು ಸಂಮಾನಗಳನ್ನು ಪಡೆದಿದ್ದರು .
ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ನಮ್ಮ ಮೂಡುಬಿದಿರೆಯ ಯಕ್ಷಸಂಗಮದ ಸಂಮಾನ – ಕೂಟ ನಡೆದಿರಲಿಲ್ಲ . ಆದರೂ , ಈ ವರ್ಷ ನಾವು ಕೂಟ ನೆರವೇರಿಸದಿದ್ದರೂ , ಯಕ್ಷಸಂಗಮದ ವತಿಯಿಂದ ಬಲಿಪ ಪ್ರಸಾದ್ ಬಲಿಪರಿಗೆ ಅವರ ಸ್ವಗೃಹದಲ್ಲೇ , ತಂದೆಯವರೊಂದಿಗೆಯೇ ಅವರಿಗೆ ಸಂಮಾನ ಮಾಡಿದ್ದೆವು . ಆಗ ತುಂಬಾ ಉತ್ಸಾಹದಿಂದ ನಮ್ಮನ್ನು ಸ್ವಾಗತಿಸಿ , ಆದರಿಸಿ ,ಸತ್ಕರಿಸಿದ ಪ್ರಸಾದರು , ತಾವೇ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ , ತಮ್ಮ ಮನೆಯಲ್ಲಿ ನೆಟ್ವರ್ಕ್ ಸಮಸ್ಯೆಯಿದ್ದ ಕಾರಣ , ಮನೆಯ ಹತ್ತಿರದ ಎತ್ತರದ ಪ್ರದೇಶಕ್ಕೆ ಹೋಗಿ , ಆ ಫೋಟೋಗಳನ್ನು ನನಗೆ ವಾಟ್ಸಾಪ್ ಮೂಲಕ ಕೂಡಲೇ ಹಂಚಿ ಸಂಭ್ರಮಿಸಿದ ಆ ಕ್ಷಣಗಳು ಈಗಲೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ .
ಆ ಸಂದರ್ಭ ಈಗಲೂ ನನ್ನ ಸ್ಮ್ರತಿಪಟಲದಲ್ಲಿ ಸ್ಥಾಯಿಯಾಗಿದೆ . ಸರಳ ವ್ಯಕ್ತಿತ್ವದ ಪ್ರಸಾದರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೂ ಇಲ್ಲ . ತಮ್ಮ ತಂದೆ 85 ವರ್ಷದ ಯಕ್ಷರಂಗದ ದಂತಕಥೆ , ಯಕ್ಷರಂಗದ. ಅಪೂರ್ವ ಸಂಪನ್ಮೂಲ ವ್ಯಕ್ತಿ ಎನಿಸಿದ ಬಲಿಪ ನಾರಾಯಣ ಭಾಗವತರು , ತಮ್ಮ ಧರ್ಮಪತ್ನಿ , ಮೂವರು ಹೆಣ್ಣು ಮಕ್ಕಳು , ಮಾಧವ ಬಲಿಪ , ಶಿವಶಂಕರ ಬಲಿಪ ( ಇವರೂ ಭಾಗವತರು ) , ಶಶಿಧರ ಬಲಿಪ ಮೂವರು ಸಹೋದರರು ಸಹಿತ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿರುವ ಪ್ರಸಾದ್ ಬಲಿಪರಿಗೆ ದಿವ್ಯ ಸಾಯುಜ್ಯ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಈ ವಿಷಾದದ ಸುದ್ದಿಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಯಕ್ಷಸಂಗಮ ಮೂಡುಬಿದಿರೆ ಹಾಗೂ ಸರ್ವ ಕಲಾಭಿಮಾನಿಗಳ ಪರವಾಗಿ ಕಲಾಮಾತೆ ಹಾಗೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .
- ಡಾ. ಶಾಂತರಾಮ ಕುಡ್ವ
Discussion about this post