ಬೆಂಗಳೂರು : ಕೊರೋನಾ ಲಸಿಕೆ ವಿತರಣೆಯಲ್ಲಿ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಟ್ಟು ನಿಟ್ಟಿನ ಸೂಚನೆ ರವಾನಿಸಿದ್ದು, ಮೊದಲು ಮತ್ತು ಎರಡನೇ ಡೋಸ್ ವಿತರಣೆಯಲ್ಲಿ ಪ್ರಗತಿಯಾಗಬೇಕು ಅಂದಿದ್ದಾರೆ.
ಹೀಗಾಗಿ ಲಸಿಕೆ ವಿತರಣಾ ಕಾರ್ಯಕ್ಕೆ ಸಿಕ್ಕಾಪಟ್ಟೆ ವೇಗ ನೀಡಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಲಸಿಕೆ ವಿತರಣೆಯ ಹೊಣೆ ಹೊತ್ತಿರುವ ಎಲ್ಲರೂ ಬೆವರು ಸುರಿಸುತ್ತಿದ್ದಾರೆ. ಕೆಲವರು ಈ ನಿಟ್ಟಿನಲ್ಲಿ ನಿಯತ್ತಿನಲ್ಲಿ ದುಡಿಯುತ್ತಿದ್ರೆ ಮತ್ತೆ ಕೆಲವರು ಕಳ್ಳ ಮಾರ್ಗ ಹಿಡಿದಿದ್ದಾರೆ. ಲಸಿಕೆ ಪಡೆಯದವರಿಗೂ ಲಸಿಕೆ ನೀಡಲಾಗಿದೆ ಎಂದು ಕಂಪ್ಯೂಟರ್ ನಲ್ಲಿ ನಮೂದಿಸುತ್ತಿದ್ದಾರೆ ಈ ಮೂಲಕ ನೂರರಷ್ಟು ಪ್ರಗತಿ ಸಾಧಿಸಲು ಮುಂದಾಗಿದ್ದಾರೆ. ಇಂತಹ ಎಡವಟ್ಟು ಹತ್ತಾರು ಸಲ ನಡೆದರೂ ಆರೋಗ್ಯ ಸಚಿವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಈ ನಡುವೆ 7 ತಿಂಗಳ ಹಿಂದೆ ಮೃತಪಟ್ಟ ವೃದ್ಧೆಯೊಬ್ಬರಿಗೆ ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ಸಂದೇಶವನ್ನು ಆರೋಗ್ಯ ಇಲಾಖೆ ಮಂಗಳವಾರ ರವಾನಿಸಿದ್ದು, ತಮ್ಮ ಕಾರ್ಯಕ್ಷಮತೆಗೆ ಸಾಕ್ಷಿ ನೀಡಿದೆ. ಈ ಮೂಲಕ ಲಸಿಕೆ ನೋಂದಣಿ ವಿಚಾರದಲ್ಲಿ ತಮ್ಮ ಎಡವಟ್ಟು ಮುಂದುವರಿದಿದೆ ಎಂದು ಸಾಕ್ಷಿ ಕೊಟ್ಟಿದೆ.
ಬೆಂಗಳೂರು ಪೀಣ್ಯ ಬಳಿಕ ಮಂಜುನಾಥ ನಗರ ನಿವಾಸಿ ಲಕ್ಷ್ಮಿ ದೇವಿ ( 70) ಜೂನ್ ತಿಂಗಳಲ್ಲಿ ಮೃತಪಟ್ಟಿದ್ದರು. ಮಾರ್ಚ್ 3ರಂದು ಅವರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರರು. ಈ ನಡುವೆ ಕಳೆದ ಸೋಮವಾರ ಬಿಬಿಎಂಪಿಯವರು ಕರೆ ಮಾಡಿ ಲಕ್ಷ್ಮಿ ದೇವಿಯವರ 2ನೇ ಡೋಸ್ ಬಗ್ಗೆ ವಿಚಾರಿಸಿದ್ದರು. ಅವರು ಮೃತಪಟ್ಟಿರುವುದಾಗಿ ಅವರ ಮನೆಯವರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಮನೆಯವರ ಮೊಬೈಲ್ ನಂಬರ್ ಗೆ ಲಕ್ಷ್ಮಿ ದೇವಿಯವರ ಎರಡನೇ ಡೋಸ್ ಪೂರ್ಣಗೊಂಡಿದೆ ಅನ್ನುವ ಸಂದೇಶ ಬಂದಿದೆ. ಅಂದ ಹಾಗೇ ಇದೇನು ಹೊಸದಲ್ಲ, 2 ಡೋಸ್ ಪಡೆಯದ ಅನೇಕರ ಮೊಬೈಲ್ ಗೆ 2ನೇ ಡೋಸ್ ಪಡೆದಿರುವುದಾಗಿ ಸಂದೇಶ ಬರುತ್ತಿದೆ. ಹೀಗಾದ್ರೆ ನಾಲ್ಕನೇ ಅಲೆಯ ಹೊತ್ತಿಗೆ ಇನ್ನೇನು ಗ್ರಹಚಾರ ಕಾದಿದೆಯೋ..
Discussion about this post