ಬೆಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ಇಲ್ಲ. ಹಾಗಿದ್ದರೂ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ಸಾಗಿದೆ.ಗಣಿಗಾರಿಕೆ ಅನ್ನುವ ಇಲಾಖೆಯ ಅಧಿಕಾರಿಗಳ ಕೃಪಾಕಟಾಕ್ಷದಿಂದಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಎಂಜಲು ಕಾಸಿನಾಸೆಗೆ ಬಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳು ಸಾಗಾಟಕ್ಕೆ ನೆರಳಾಗಿದ್ದಾರೆ.
ಜಿಲ್ಲಾಧಿಕಾರಿಗಳು ಅಕ್ರಮ ಮರಳುಗಾರಿಕೆ ಕುರಿತಂತೆ ಸಭೆ ನಡೆಸಿದ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡೋ ಸಂಪ್ರದಾಯ ನಡೆಯುತ್ತದೆ. ಮತ್ತೆ ಎಂದಿನಂತೆ ಮರಳು ಲಾರಿಗಳು ಓಡಾಟ ನಡೆಸುತ್ತದೆ.

ಇನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ಬಂದ ಶಶಿಕುಮಾರ್ ಕೆಲ ದಿನಗಳ ಕಾಲ ಅಕ್ರಮ ಮರಳುಗಾರಿಕೆ ವಿರುದ್ಧ ಸಮರ ಸಾರಿದರು. ಆದರೆ ಠಾಣಾ ಹಂತದಲ್ಲಿ ಅಧಿಕಾರಿಗಳ ಸಹಕಾರ ನಿರೀಕ್ಷಿತವಾಗಿ ದೊರೆಯಲಿಲ್ಲ.
ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ಕೃತ ಚರ್ಚೆ ನಡೆದಿದೆ. ಸಾಂಪ್ರದಾಯಿಕ ರೀತಿಯಲ್ಲಿ ಮಾತ್ರ ಮರಳು ತೆಗೆಯಬೇಕಾಗಿದ್ದು, ಯಾವುದೇ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ. ಜೊತೆಗೆ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ನ ಅನುಮತಿ ಪಡೆಯುವುದು ಕೂಡಾ ಕಡ್ಡಾಯವಾಗಿದೆ.

ದಕ್ಷಿಣಕನ್ನಡದ ಮರಳುಗಾರಿಕೆಗೆ ಸಂಬಂಧಪಟ್ಟಂತೆ ಸರ್ಕಾರ ಕೊಟ್ಟಿರುವ ಅನುಮತಿ ಮತ್ತು ಷರತ್ತುಗಳು ಕಠಿಣವಾಗಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳುಗಾರಿಕೆಗೆ ಯಂತ್ರಗಳನ್ನು ಬಳಸುವುದು ಹೇಗೆ ಅನ್ನುವುದನ್ನು ಹುಡುಕಿಯಾಗಿರುತ್ತದೆ. ಅನುಮತಿ ಇಲ್ಲದ ವೇಳೆಯಲ್ಲೇ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆದಿತ್ತು. ಇನ್ನು ಸಾಂಪ್ರದಾಯಿಕ ಮರಳುಗಾರಿಕೆ ಅನುಮತಿ ಸಿಕ್ಕ ಮೇಲೆ ಕೇಳಬೇಕಾ.
ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ವರದಿ ಮಾಡಲು ಹೋದ ಸಂದರ್ಭದಲ್ಲಿ ಪತ್ರಕರ್ತರನ್ನೇ ಮರಳು ದಂಧೆಕೋರರು ಅಟ್ಟಾಡಿಸಿಕೊಂಡು ಹೋಗಿದ್ದರು. ಅಂದ ಮೇಲೆ ಅವರೆಷ್ಟು ಕೊಬ್ಬಿರಬೇಕು ಲೆಕ್ಕ ಹಾಕಿ.
Discussion about this post