ಬೆಂಗಳೂರು : ಕರಾವಳಿಯಲ್ಲಿ ಪ್ರಾರಂಭವಾದ ಹಿಜಬ್ ವಿವಾದ ಇದೀಗ ರಾಜ್ಯದ ಹಲವು ಶಾಲೆಗಳಲ್ಲಿ ಪ್ರಾರಂಭಗೊಂಡಿದೆ. ಶೈಕ್ಷಣಿಕ ವರ್ಷ ಮುಕ್ತಾಯದ ಹಂತಕ್ಕೆ ಬಂದು ನಿಂತಿರುವ ಸಂದರ್ಭದಲ್ಲಿ ವಿವಾದ ಎದ್ದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ವಿವಾದ ಪ್ರಾರಂಭದ ಮೊದಲ ಹಂತದಲ್ಲಿ ಕೆಲವೇ ಕೆಲವು ವಿದ್ಯಾರ್ಥಿನಿಯರು ಈ ಬಗ್ಗೆ ದನಿ ಎತ್ತಿದ್ದರು. ಆದಾದ ಬಳಿಕ ಅದು ವಿಸ್ತಾರವಾಗುತ್ತಾ ಸಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಅಲ್ಲೊಂದು ಇಲ್ಲೊಂದು ಅನ್ನುವಂತೆ ವಿವಾದಗಳು ಪ್ರಾರಂಭವಾಗಿತ್ತು, ಆದರೆ ಅದು ಕಾಡ್ಗಿಚ್ಚಿನಂತೆ ಹಬ್ಬಿರಲಿಲ್ಲ. ಈ ಬಾರಿ ಶೈಕ್ಷಣಿಕ ಭವಿಷ್ಯವನ್ನು ಬದಿಗೊತ್ತಿ ಹಿಜಬ್ ಪರವಾದ ಹೋರಾಟ ಹಾಗೂ ಅದರ ವಿರುದ್ಧ ಕೇಸರಿ ಶಾಲಿನ ಪ್ರತಿಭಟನೆ ಪ್ರಜ್ಞಾವಂತರದಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಈ ವಿವಾದ ಎಬ್ಬಿಸಿರುವುದರ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿದೆ ಅನ್ನುವ ಅನುಮಾನಗಳು ವ್ಯಕ್ತವಾಗಿದೆ. ಜೊತೆಗೆ ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ನಲ್ಲಿರುವ ಕೆಲ ಮುಸ್ಲಿಂ ಮಹಿಳಾ ಮುಖಂಡರು, ಹಿಜಬ್ ನಮ್ಮ ಧರ್ಮದ ಪ್ರತೀಕ, ನನ್ನ ಹಿಜಬ್ ನನ್ನ ಹಕ್ಕು ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ ತರಗತಿಗಳಲ್ಲಿ ಹಿಜಬ್ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ. ಅಲ್ಲಿಗೆ ಈ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ, ಹೋರಾಟದ ಲಾಭ ಪಡೆಯುವ ಉದ್ದೇಶವೂ ಕಾಂಗ್ರೆಸ್ ಗಿಲ್ಲ ಅಂದಾಯ್ತು.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಜಬ್ ಹೋರಾಟ ಕುರಿತಂತೆ ಕಾಳಜಿ ತೋರುತ್ತಿರುವವರು ಯಾರು ಅನ್ನುವುದನ್ನು ನೋಡಿದರೆ ಬಹುತೇಕರು ಎಡಪಂಥೀಯ ಚಿಂತನೆಗಳನ್ನು ಹೊಂದಿದವರು. ಈ ಹಿಂದೆಯೂ ಇವರೆಲ್ಲಾ ಬಿಜೆಪಿ ವಿರೋಧಿ ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಅನ್ನುವ ಗಮನಾರ್ಹ.
ಈ ಬಗ್ಗೆ ಮಾಹಿತಿ ನೀಡಿರುವ ನಿವೃತ ಪೊಲೀಸ್ ಅಧಿಕಾರಿಯೊಬ್ಬರು, ಇದೊಂದು ಪಕ್ಕಾ ರಾಜಕೀಯ ಹೋರಾಟ. ಮತ ವಿಭಜನೆಗಾಗಿ ಮಾಡಿರುವ ಯೋಜನೆಯೇ ಹೊರತು ಬೇರೇನು ಅಲ್ಲ. ಸಾಕಷ್ಟು ಪ್ಲಾನ್ ಮಾಡಿ ಈ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ದೊಡ್ಡ ಮನಸ್ಸು ತನಿಖೆಯೊಂದನ್ನು ಮಾಡಲಿ, ಹೋರಾಟ ಹೇಗೆ ಪ್ರಾರಂಭವಾಯ್ತು. ಹೋರಾಟ ಪ್ರಾರಂಭಿಸಿದ ಸಂದರ್ಭದಲ್ಲಿ ಯಾರ ಫೋನ್ ಗಳಿಗೆ ಎಲ್ಲಿಂದ ಕರೆ ಬಂತು, ಯಾರೆಲ್ಲಿ ಸಭೆ ನಡೆಸಿದರು ಅನ್ನುವುದನ್ನು ಕೆದಕಲಿ. ಅಸಲಿ ಸತ್ಯ ಹೊರ ಬರುತ್ತದೆ ಅಂದಿದ್ದಾರೆ.
ಇನ್ನು ವಿವಾದ ಕುರಿತಂತೆ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿದ್ದು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಹೋರಾಟ ಹೀಗೆ ಮುಂದುವರಿದರೆ ನಾಳೆ ವಿದ್ಯಾರ್ಥಿನಿಯರ ಶಿಕ್ಷಣವೇ ಮೊಟಕುಗೊಳ್ಳುವ ಆತಂಕವಿದೆ ಅಂದಿದ್ದಾರೆ.
Discussion about this post