ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ಕಾರಣಕ್ಕೆ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಈ ವೇಳೆ ಬಿಜೆಪಿ ಕೈ ಹಿಡಿಯಲು ಮುಂದಾಗಿದ್ದ ರೋಷನ್ ಬೇಗ್ ನಿರಾಶೆ ಅನುಭವಿಸಬೇಕಾಯ್ತು. ಈ ನಡುವೆ ಶಿವಾಜಿನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ರಿಜ್ವಾನ್ ಹರ್ಷದ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರೋಷನ್ ಬೇಗ್ ರಾಜಕೀಯವಾಗಿ ನಿರಾಶ್ರಿತರಾಗಿದ್ದಾರೆ.
ಈ ನಡುವೆ ಮೊನ್ನೆ ಮೊನ್ನೆ ಕಾಂಗ್ರೆಸ್ ತೊರೆಯಲು ಮುಂದಾಗಿರುವ ಸಿಎಂ ಇಬ್ರಾಹಿಂ ಅವರನ್ನು ಭೇಟಿಯಾಗಿರುವ ರೋಷನ್ ಬೇಗ್ ರಾಜಕೀಯ ಚರ್ಚೆ ನಡೆಸಿದ್ದಾರೆ. ಆದರೆ ಶಿವಾಜಿನಗರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ರೆ ಗೆಲವು ಸುಲಭವಿಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ರೋಷನ್ ಬೇಗ್ ಈ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿದ್ದು. ಈ ಪ್ರಕ್ರಿಯೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡಾ ಸ್ಪಂದಿಸಿದ್ದಾರೆ ಅನ್ನಲಾಗಿದೆ.
ಈ ನಿಟ್ಟಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ರೋಷನ್ ಬೇಗ್ ಭೇಟಿಯಾಗಿದ್ದಾರೆ. ಕೇವಲ ಭೇಟಿಯಾಗಿದ್ರೆ ನಿರ್ಲಕ್ಷ್ಯ ಮಾಡಬಹುದಾಗಿತ್ತು. ಆದರೆ ಈ ವೇಳೆ ಸಾಕಷ್ಟು ಮಾತುಕತೆಗಳು ಕೂಡಾ ನಡೆದಿದೆ. ಹಾಗೂ ಈ ಭೇಟಿಯ ಮೂಲಕ ಉಳಿದ ನಾಯಕರಿಗೆ ಸಂದೇಶ ಕೂಡಾ ರವಾನಿಸಲಾಗಿದೆ ಅನ್ನಲಾಗಿದೆ.
ಒಟ್ಟಿನಲ್ಲಿ ರಾಜಕೀಯದಲ್ಲಿ ಯಾರು ಶಾಶ್ವತ ಮಿತ್ರರಲ್ಲ, ಯಾರು ಶಾಶ್ವತ ಶತ್ರುಗಳಲ್ಲ ಅನ್ನುವುದು ಸಾಬೀತಾಗಿದೆ. ಮಾತ್ರವಲ್ಲದೆ ಶತ್ರುವಿನ ಶತ್ರು ಮಿತ್ರ ಅನ್ನುವ ಸಂದೇಶವನ್ನು ಈ ಭೇಟಿ ಕೊಟ್ಟಿರುವುದು ಸ್ಪಷ್ಟ.
Discussion about this post