ಬೆಂಗಳೂರು : ಕೊರೋನಾ ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸದಿದ್ರೆ ಮುಂದೆ ನರಕ ಸದೃಶ್ಯ ದಿನಗಳು ಕಾದಿದೆ ಅನ್ನುವುದು ಸ್ಪಷ್ಟ. ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇನ್ನೊಂದು ವಾರದಲ್ಲಿ 10 ಸಾವಿರ ಸೋಂಕಿತರು ಪತ್ತೆಯಾದರೂ ಅಚ್ಚರಿ ಇಲ್ಲ.
ಈ ನಡುವೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್ಟಿಸಿವಿರ್ ಇಂಜೆಕ್ಷನ್ ಅಭಾವ ಕಾಣಿಸಿಕೊಂಡಿದೆ. ಸೋಂಕಿನ ಪ್ರಮಾಣ ತಗ್ಗಿಸಬೇಕಾದರೆ ಈ ಇಂಜೆಕ್ಷನ್ ಬೇಕೇ ಬೇಕು,ಆದರೆ ಇಂಜೆಕ್ಷನ್ ಲಭ್ಯವಿಲ್ಲವಾದ್ರೆ ರೋಗಿಗಳ ಕಥೆಯೇನಾಗಬೇಕು.
ಹಾಗಂತ ಈ ಕೊರತೆಗೆ ಯಾರನ್ನೂ ದೂರುವ ಹಾಗಿಲ್ಲ. ಅದನ್ನು ತಯಾರಿಸುವ ಕಂಪನಿಗಳಲ್ಲೇ ಈ ಇಂಜೆಕ್ಷನ್ ಲಭ್ಯವಿಲ್ಲ. ಕೊರೋನಾ ತೀವ್ರವಾಗಿದ್ದ ಸಂದರ್ಭದಲ್ಲಿ ಈ ಇಂಜೆಕ್ಷನ್ ಅನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗಿತ್ತು. ಯಾವಾಗ ಸೋಂಕಿನ ಅಬ್ಬರ ಕಡಿಮೆಯಾಯ್ತೋ, ಇಂಜೆಕ್ಷನ್ ಬೇಡಿಕೆಯೂ ಕುಸಿಯಿತು. ಹೀಗಾಗಿ ಉತ್ಪಾದನೆಯನ್ನು ಕಡಿಮೆಗೊಳಿಸಲಾಯ್ತು. ಆದರೆ ಇದೀಗ ಸೋಂಕಿನ ಅಬ್ಬರ ಮತ್ತೆ ತೀವ್ರವಾಗಿದೆ. ಈಗ ಏಕಾಏಕಿ ರೆಮ್ಡಿಸಿವಿರ್ ಬೇಕು ಅಂದ್ರೆ ಕಂಪನಿಯವರಾದರೂ ಏನು ಮಾಡಲು ಸಾಧ್ಯ.
ಹೀಗಾಗಿ ಬೇಡಿಕೆ ಹಾಗೂ ಪೂರೈಕೆ ಸರಿ ಹೊಂದಬೇಕಾದರೆ ಇನ್ನು 10 ದಿನಗಳು ಬೇಕು.ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಹಮದಬಾದ್ ಮತ್ತು ವಡೋದ್ರಾದ ಪ್ಲಾಂಟ್ ಗಳಲ್ಲಿ ರೆಮ್ಡಿಸಿವಿರ್ ಉತ್ಪಾದನಾ ಕಾರ್ಯಕ್ಕೆ ವೇಗ ನೀಡಲಾಗಿದೆ. ತಿಂಗಳಲ್ಲಿ 12 ಲಕ್ಷ ಡೋಸ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ.
ಈ ನಡುವೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಪತ್ರವೊಂದು ರವಾನೆಯಾಗಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಿದೆ. ಜೊತೆಗೆ ಆಸ್ಪತ್ರೆಗೂ ಸಿಕ್ಕಾಪಟ್ಟೆ ಜನ ದಾಖಲಾಗುತ್ತಿದ್ದಾರೆ. ಇದರಲ್ಲಿ ಬಹುತೇಕರು ರೋಗ ಲಕ್ಷಣ ಹೊಂದಿರುವವರಾಗಿದ್ದಾರೆ, ಹೀಗಾಗಿ ಅವರ ಚಿಕಿತ್ಸೆಗೆ ರೆಮ್ಡಿಸಿವಿರ್ ಬೇಕೇ ಬೇಕು. ಆದರೆ ಅದು ಲಭ್ಯವಾಗುತ್ತಿಲ್ಲ. ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಛಾಲೆಂಜ್ ಆಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ನಮ್ಮಲ್ಲಿ ಇನ್ನು ಕೆಲವು ದಿನಕ್ಕೆ ಸಾಕಾಗುವಷ್ಟು ರೆಮ್ಡಿಸಿವರ್ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಇಂದೋರ್ ನಲ್ಲಿ ರೆಮ್ಡಿಸಿವರ್ ಖಾಲಿಯಾಗಿದ್ದು, ಒಂದೇ ಒಂದು ಬಾಟಲ್ ಸಿಗುತ್ತಿಲ್ಲ. ಈ ಕಾರಣದಿಂದ ಜನ ಬೀದಿಗೆ ಬಂತು ಪ್ರತಿಭಟನೆ ಪ್ರಾರಂಭಿಸಿದ್ದಾರೆ.
Discussion about this post