ಬೆಂಗಳೂರು : tv9 ವಾಹಿನಿಯ ಮೂಲಕ ಸುದ್ದಿ ವಾಚಕ ವೃತ್ತಿ ಪ್ರಾರಂಭಿಸಿದ್ದ ರೆಹಮಾನ್ ಹಾಸನ್, 2015ರಲ್ಲಿ ಬಿಗ್ ಬಾಸ್ ಗೆ ತೆರಳುವ ಸಲುವಾಗಿ ವಾಹಿನಿಯನ್ನು ತೊರೆದಿದ್ದರು. ಬಿಗ್ ಬಾಸ್ ಮನೆಯಿಂದ ಮರಳಿದವರು ಮತ್ತೆ ಟಿವಿ9 ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಷ್ಟು ವರ್ಷ ಅಂತಾ ನ್ಯೂಸ್ ಓದ್ಲಿ, ಲೈಫ್ ನಲ್ಲೇ ಏನಾದ್ರು ಬದಲಾವಣೆ ಬೇಕು, ಹೊಸದೊಂದು ಪ್ರಯೋಗಕ್ಕೆ ಸಜ್ಜಾಗಬೇಕು ಅಂದಿದ್ದರು.
ಅದರಂತೆ ಬಿಗ್ ಬಾಸ್ ಮನೆಯಿಂದ ಬಂದ ರಹಮಾನ್ ಹಾಸನ್ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಆದ್ಯಾಕೋ ಸಿನಿಮಾ ರಹಮಾನ್ ಅವರಿಗೆ ಕೂಡಿ ಬರಲಿಲ್ಲ. ನಂತರ ರಿಯಾಲಿಟಿ ಶೋ ಒಂದಕ್ಕೆ ನಿರೂಪಕರಾದರು. ಆದರೆ ರೆಹಮಾನ್ ಅವರು ಸುದ್ದಿ ಓದೋ ಶೈಲಿ ಕೇಳಿ ಅಭಿಮಾನಿಗಳಾದವರು ಕೂಡಾ ಈ ಪ್ರಯತ್ನವನ್ನು ಮೆಚ್ಚಲಿಲ್ಲ.
![rehaman](https://torrentspree.com/wp-content/uploads/2021/07/rehaman.jpg)
ಇದಾದ ಬಳಿ ತಮ್ಮದೇ ಡಿಜಿಟಲ್ ಮಾಧ್ಯಮ ಸಂಸ್ಥೆಯನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿದರು. ಪ್ರಾರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಸ್ಥೆಯಲ್ಲಿ ಅದೇನು ಕಿರಿಕ್ ಆಯ್ತೋ ಗೊತ್ತಿಲ್ಲ. ರೆಹಮಾನ್ ಡಿಜಿಟಲ್ ಕನಸು ಈಡೇರಲಿಲ್ಲ. ಹೀಗಾಗಿ ಬಳಿಕ ಪವರ್ ಟಿವಿಯಲ್ಲಿ ಕಾಣಿಸಿಕೊಂಡ ರೆಹಮಾನ್, ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದ್ದರು. ಆದರೆ ಪವರ್ ಟಿವಿ ತನ್ನದೇ ಸಮಸ್ಯೆಯಲ್ಲಿದೆ. ಹೀಗಾಗಿ ರಹಮಾನ್ ಗೆ ಪವರ್ ವಾತಾವರಣ ಅದ್ಯಾಕೋ ಹಿಡಿಸಲಿಲ್ಲ.
ಇದೀಗ ಟಿವಿ9 ವಾಹಿನಿಗೆ ಮತ್ತೆ ಮರಳುತ್ತಿರುವುದಾಗಿ ಹೇಳಿರುವ ರೆಹಮಾನ್ ಸುದ್ದಿ ಓದುವರ ಜೊತೆಗೆ ದೊಡ್ಡದೊಂದು ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದೇನೆ ಅಂದಿದ್ದಾರೆ.
Discussion about this post