ನಟಿ ರಾಗಿಣಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಸಮ್ಮುಖದಲ್ಲಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾದ ಬಳಿಕ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ ಎಂದು ಸುದ್ದಿಯಾಗಿತ್ತು.
ಆದಾದ ಬಳಿಕ ಶಾಸಕ ಅರವಿಂದ ಲಿಂಬಾವಳಿ ರಾಗಿಣಿಯವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂದು ಹೇಳಲಾಯ್ತು. ಆದರೆ ರಾಗಿಣಿ ಬಿಜೆಪಿಗೆ ಸೇರ್ಪಡೆಯಾಗಲೇ ಇಲ್ಲ. ಇದಾದ ಬೆನ್ನಲ್ಲೇ ರಾಗಿಣಿ ಬಿಜೆಪಿ ಸೇರುವುದಿಲ್ಲವಂತೆ, ಅವರನ್ನು ಕಾಂಗ್ರೆಸ್ ನವರು ಸೆಳೆದಿದ್ದಾರೆ ಅನ್ನುವ ಸುದ್ದಿ ಟಿವಿ ವಾಹಿನಿ ವರದಿಗಾರರ ನಡುವೆ ಓಡಾಡತೊಡಗಿತು.
ಈ ಎಲ್ಲದರ ನಡುವೆ ಇಂದು ಮಧ್ಯಾಹ್ನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಅಶ್ವಥ್ ನಾರಾಯಣ್ ಅವರು ಒಂದು ಗಂಟೆ ಕಾದರೂ ರಾಗಿಣಿ ದ್ವಿವೇದಿ ಕಚೇರಿಗೆ ಆಗಮಿಸಲಿಲ್ಲ. ಇದರಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಯ್ತು.
ಅರವಿಂದ ಲಿಂಬಾವಳಿ ಅವರು ತುರ್ತಾಗಿ ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ಮುರಳೀಧರ್ ರಾವ್ ಕೂಡ ಲಭ್ಯವಿಲ್ಲ. ಹೀಗಾಗಿ ಇಂದು ನಿಗದಿಯಾಗಿದ್ದ ಸೇರ್ಪಡೆ ಕಾರ್ಯಕ್ರಮ ರದ್ದಾಗಿದೆ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿದ್ದು, ಅವರು ಕಾಂಗ್ರೆಸ್ ಸೇರಿಲ್ಲ ಎನ್ನಲಾಗಿದೆ.
ಆದರೆ ಇದ್ಯಾವುದಕ್ಕೂ ರಾಗಿಣಿ ತುಟಿ ಬಿಚ್ಚಿಲ್ಲ.