ಪುತ್ತೂರು : ಕೇರಳ ಮಾಡೆಲ್ ವಿಫಲವಾಗಿರುವ ಕಾರಣ ದೇವರನಾಡಿನಲ್ಲಿ ಕೊರೋನಾ ರಣಕೇಕೆಗೈಯುತ್ತಿದೆ. ಕೇರಳ ಸರ್ಕಾರ ಮಾಡಿದ ಒಲೈಕೆ ರಾಜಕಾರಣ ಇದೀಗ ಮೂರನೇ ಅಲೆಗೆ ಮುನ್ನುಡಿ ಬರೆದಿದೆ. ತಜ್ಞರ ಊಹೆಯನ್ನೂ ಮೀರಿ ಮೂರನೇ ಅಲೆ ಶೀಘ್ರದಲ್ಲೇ ಎಂಟ್ರಿ ಕೊಡಲಿದೆ ಅಂದ್ರೆ ಕೇರಳ ಸರ್ಕಾರ ಮಾಡಿರುವ ತಪ್ಪು ಅದೆಷ್ಟು ದೊಡ್ಡದಿರಬಹುದು.
ಈ ನಡುವೆ ಕೇರಳದಲ್ಲಿ ಕೊರೋನಾ ಅಬ್ಬರಿಸುತ್ತಿರುವ ಕಾರಣ ಕರಾವಳಿ ಜಿಲ್ಲೆಗಳಲ್ಲೂ ಸೋಂಕಿನ ಪ್ರಮಾಣ ಏರತೊಡಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕಾರಣ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳು ಕೇರಳದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಹೀಗಾಗಿ ಈ ಭಾಗದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಮಂಗಳೂರಿನ ಕೋಟೆಕಾರ್, ಮಳವೂರು ಸುಳ್ಯದ ಗುತ್ತಿಗಾರು, ಪುತ್ತೂರಿನ ಮುಂಡೂರು ಗ್ರಾಮಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ಏರತೊಡಗಿದೆ. ಜೊತೆಗೆ ಟಾರ್ಮಾಡಿ, ಅಮ್ಟಾಡಿ, ಇಂದಬೆಟ್ಟು ಗ್ರಾಮದಲ್ಲೂ ಹೊಸ ಪ್ರಕರಣಗಳು ದಾಖಲಾಗಿವೆ.
ಆದರೆ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಶಾಸಕರು ಕಟ್ಟು ನಿಟ್ಟಿನ ಕ್ರಮಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ನಡುವೆ ಕೇರಳದಿಂದ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಫೀಲ್ಡಿಗೆ ಇಳಿದಿದ್ದಾರೆ.
ಪುತ್ತೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೇರಳ ಪುತ್ತೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಬಿಟ್ಟು ಇತರ 13 ರಸ್ತೆಗಳಿಗೆ ಮಣ್ಣು ಸುರಿದು ಬಂದ್ ಮಾಡಿ ಎಂದು ಸೂಚಿಸಿದ್ದಾರೆ. ಕೇರಳ ಪುತ್ತೂರು ಸಂಪರ್ಕದ ಅಧಿಕೃತ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಬಹುದು. ಆದರೆ ಉಳಿದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ರೆ ಓಪನ್ ಮಾಡಿ ಬರ್ತಾರೆ. ಹೀಗಾಗಿ ಮೇನಾಲ, ಸ್ವರ್ಗ, ಸುಳ್ಯಪದವುಗಳಲ್ಲಿ ಚೆಕ್ ಪೋಸ್ಟ್ ಬಿಗಿಗೊಳಿಸಿ ಎಂದು ಆದೇಶಿದ್ದಾರೆ. 13 ರಸ್ತೆಗಳಿಗೆ ಮಣ್ಣು ಸುರಿಯುವ ಕುರಿತಂತೆ ಲೋಕೋಪಯೋಗಿ ಇಂಜಿನಿಯರ್ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರ್ ಗೆ ಜವಾಬ್ದಾರಿ ವಹಿಸಲಾಗಿದೆ. ಇದೇ ವೇಳೆ ಗ್ರಾಮ ಪಂಚಾಯತ್ ಗಳಲ್ಲಿ ರಚಿಸಲಾಗಿರುವ ಕೋವಿಡ್ ಕಾರ್ಯಪಡೆಗಳು ಸಭೆ ನಡೆಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಇನ್ನು ಕೆಲವೇ ದಿನಗಳಲ್ಲಿ ಹಬ್ಬಗಳು ಪ್ರಾರಂಭವಾಗುತ್ತದೆ. ಹೀಗಾಗಿ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮದ ಕೋವಿಡ್ ಕಾರ್ಯಪಡೆಗಳು ಸಭೆ ನಡೆಸಿ 3 ದಿನದಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
Discussion about this post