ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಾಗೂ ಕರ್ನಾಟಕದ ಜಾನಪದ ಸಿರಿಸಂಪತ್ತನ್ನು ವಿದೇಶಗಳಿಗೆ ಪರಿಚಯಿಸಿದ ಡಾ. ಚಂದ್ರಶೇಖರ ಕಂಬಾರ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳಿಂದ ಕಂಬಾರರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಹಿಂದೆ ಜ್ಞಾನಪೀಠ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು.
ಕಂಬಾರರ ಕಿರುಪರಿಚಯ
ಡಾ. ಚಂದ್ರಶೇಖರ ಕಂಬಾರರು 1937 ಜನವರಿ ,2 ರಂದು ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ, ೧೯೬೨ರಲ್ಲಿ ‘ಕರ್ನಾಟಕ ವಿವಿ’ಯಿಂದ ಎಂ.ಎ ಪದವಿ,ಪಿ.ಎಚ್.ಡಿ.ಪದವಿ ಪಡೆದಿರುವ ಅವರು, ಬೆಂಗಳೂರು ವಿವಿ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ. ಚಂದ್ರಶೇಖರ ಕಂಬಾರ ಕಾರ್ಯನಿರ್ವಹಿಸಿದ್ದಾರೆ.
ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಬೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಇವರ ಪ್ರಮುಖ ಕೃತಿಗಳು. ಮಹಾಮಾಯಿ ಅವರ ಇತ್ತೀಚಿನ ಹೊಸ ನಾಟಕ ಕೃತಿ.ಶಿಖರ ಸೂರ್ಯ ಅವರು ಕಾದಂಬರಿ. ಉತ್ತರ ಕರ್ನಾಟಕದ ಜಾನಪದ ರಂಗಭೂಮಿ ಇವರ ಸಂಶೋಧನಾ ಕ್ಷೇತ್ರ. “ಜಾನಪದ ವಿಶ್ವಕೋಶ” (೧೯೮೫) ದಂಥ ಬೃಹತ್ ಗ್ರಂಥ ಸಂಪುಟವನ್ನು ಕನ್ನಡದಲ್ಲಿ ಹೊರತಂದ ಕೀರ್ತಿ ಇವರದು.
ಕಂಬಾರರು ಒಟ್ಟು 25 ನಾಟಕ, 9 ಕವನ ಸಂಕಲನಗಳು ಮತ್ತು 6 ಕಾದಂಬರಿಗಳನ್ನು ರಚಿಸಿದ್ದಾರೆ. ಇನ್ನುಳಿದಂತೆ 17 ಸಂಶೋಧನ ಗ್ರಂಥ, ಒಂದು ಮಹಾಕಾವ್ಯ ಬರೆದ ಹಿರಿಮೆ ಇವರದ್ದು.
Discussion about this post