ಬೆಂಗಳೂರು : ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಅದರ ಲಾಭ ಪಡೆಯಲು ಕಾಂಗ್ರೆಸ್ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಯಡಿಯೂರಪ್ಪ ರಾಜೀನಾಮೆಯಿಂದ ಬೇಸರಗೊಂಡಿರುವ ಲಿಂಗಾಯತರ ಮತಗಳನ್ನು ಪಡೆಯಲು ಮುಂದಾಗಿರುವ ಕೈ ಪಾಳಯ ಯಡಿಯೂರಪ್ಪ ಪರ ಹೇಳಿಕೆ ಮೇಲೆ ಹೇಳಿಕೆ ನೀಡುತ್ತಿದೆ.
ಅಷ್ಟೇ ಅಲ್ಲದೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಮೋದಿ ಮುಂದಾಗಿದ್ದಾರೆ. ಈ ಹಿಂದೆ ಅಡ್ವಾಣಿ, ಜೋಷಿ, ಸುಷ್ಮಾ, ಅರುಣ್ ಜೇಟ್ಲಿ ಅವರನ್ನು ಹೀಗೆ ಮಾಡಿದ್ರು ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಇದೀಗ ಇದಕ್ಕೆಲ್ಲಾ ಉತ್ತರ ಅನ್ನುವಂತೆ ಟ್ವೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪ ಅವರ ಗುಣಗಾನ ಮಾಡಿದ್ದಾರೆ. ಪಕ್ಷಕ್ಕೆ ಮತ್ತು ಕರ್ನಾಟಕ ರಾಜ್ಯದ ಬೆಳವಣಿಗೆಗೆ ನೀಡಿರುವ ಅವಿಸ್ಮರಣೀಯ ಕೊಡುಗೆಗಳನ್ನು ಹೇಳಲು ಪದಗಳಿಂದ ಸಾಧ್ಯವಿಲ್ಲ. ದಶಕಗಳ ಕಾಲ ಅವರು ಅವಿರತವಾಗಿ ದುಡಿದು, ಕರ್ನಾಟಕದಾದ್ಯಂತ ಸಂಚಾರ ಮಾಡಿ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ.ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಗೆ ಯಡಿಯೂರಪ್ಪನವರ ಬದ್ಧತೆ ಶ್ಲಾಘನೀಯ ಎಂದು ಪ್ರಧಾನಿ ಹೊಗಳಿದ್ದಾರೆ.
ಇದೇ ವೇಳೆ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಶಾಸಕಾಂಗ ಮತ್ತು ಕಾರ್ಯಾಂಗ ಅನುಭವ ಹೊಂದಿರುವ ಬೊಮ್ಮಾಯಿಯವರು ಸರ್ಕಾರದ ಕೆಲಸ, ಯೋಜನೆಗಳನ್ನು ಜನತೆಗೆ ಸರಿಯಾಗಿ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ ಅನ್ನೋ ವಿಶ್ವಾಸ ನನಗಿದೆ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.
Discussion about this post