ಹಾವೇರಿ : ಉಕ್ರೇನ್ನ ಖಾರ್ಕಿವ್ ನಗರದ ಮೇಲೆ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿದ ವೈಮಾನಿಕ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿಯಾಗಿದ್ದಾನೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ನಿವಾಸಿ ನವೀನ್ ಶೇಖರಪ್ಪ ಗ್ಯಾನಗೌಡರ್(21) ಎಂದು ಗುರುತಿಸಲಾಗಿದೆ.
ಕರೆನ್ಸಿ ವಿನಿಮಯ ಸಲುವಾಗಿ ತೆರಳಿದ್ದ ಸಂದರ್ಭದಲ್ಲಿ ಖಾರ್ಕಿವ್ ನಿಂದ 10.ಕಿ.ಮೀ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ನವೀನ್ ಉಕ್ರೇನ್ ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿಜ್ಞಾನದಲ್ಲಿ ಓದುತ್ತಿದ್ದ ಎಂದು ಗೊತ್ತಾಗಿದೆ.
ಈ ನಡುವೆ ನವೀನ್ ಸಾವಿನ ಕುರಿತಂತೆ ತೀವ್ರ ಶೋಕ ವ್ಯಕ್ತವಾಗಿದ್ದು, ಭಾರತೀಯ ವಿದ್ಯಾರ್ಥಿ ಸಾವು ದುಃಖದ ವಿಚಾರ. ವಿದ್ಯಾರ್ಥಿಯ ಪೋಷಕರ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ. ಜೊತೆಗೆ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಇದು ಭೀಕರ ದುರಂತ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ದುಃಖ ಸಹಿಸೋ ಶಕ್ತಿಯನ್ನು ಭಗವಂತ ನೀಡಲಿ ಅಂದಿದ್ದಾರೆ.
This is an awful tragedy. My heart goes out to the family of the victim and the anxious families of all those still stuck in Ukraine. We must do everything possible to get them home. https://t.co/nmwAu9jL6F
— Shashi Tharoor (@ShashiTharoor) March 1, 2022
ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ನವೀನ್ ತಂದೆಗೆ ಕರೆ ಮಾಡಿದ್ದು, ಕೇಂದ್ರ ಸರ್ಕಾರ ನಿಮ್ಮ ನೋವಿನಲ್ಲೂ ಭಾಗಿ ಅಂದಿದ್ದಾರೆ. ಜೊತೆಗೆ ಅಗತ್ಯ ಎಲ್ಲಾ ಸಹಕಾರಗಳನ್ನು ನಾವು ನೀಡುತ್ತೇವೆ ಎಂದು ಸಾಂತ್ವಾನ ಹೇಳಿದ್ದಾರೆ. ಮೋದಿಯ ಮಾತಿಗೆ ನವೀನ್ ತಂದೆ, ಶುಕ್ರಿಯ, ಪ್ರಣಾಮ್ ಸರ್ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಂದು ಕಡೆ ನವೀನ್ ಅವರ ತಂದೆ ಶೇಖರ್ ಗೌಡ ಅವರಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ನಿಜಕ್ಕೂ ಇದು ದೊಡ್ಡ ದುರಂತ. ದೇವರು ನವೀನ್ ಆತ್ಮಕ್ಕೆ ಶಾಂತಿ ನೀಡಲಿ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲಾ ಪ್ರಯತ್ನ ಸಾಗಿದೆ. ಈ ಕುರಿತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಅಂದಿದ್ದಾರೆ.
Discussion about this post