ಈರುಳ್ಳಿ ದರ ಗಗನ ಮುಖಿಯಾಗಿದ್ದು, ಕಣ್ಣೀರು ತರಿಸೋದು ಪಕ್ಕಾ Onion price
ನಿತ್ಯ ಬಳಕೆಯ ವಸ್ತುಗಳ ದರ ದಿನದಿಂದ ದಿನಕ್ಕೆ ಏರಿಯಾಗುತ್ತಿದೆ. ಈಗಾಗಲೇ ಅಕ್ಕಿ, ಬೇಳೆ ಕಾಳುಗಳು, ಅಡುಗೆ ಎಣ್ಣೆ ಕೈ ಸುಡಲಾರಂಭಿಸಿದ್ದು, ಸಿಗೋ ಸಂಬಳ ಹಸಿದ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಅನ್ನುವಂತಾಗಿದೆ. ಇದೀಗ ಈರುಳ್ಳಿ ದರದ Onion price ಸರದಿ. ದರಾಸುರನ ವಿರುದ್ಧ ಸಮರ ಸಾರಬೇಕಾದ ಸರ್ಕಾರ ಮಾತ್ರ ಕುಂಭಕರ್ಣನಂತೆ ನಿದ್ರಿಸುತ್ತಿದೆ.
ಅನಾವೃಷ್ಟಿಯ ಕಾರಣ ಈ ಬಾರಿ ರಾಜ್ಯದಲ್ಲಿ ರೈತರು ಈರುಳ್ಳಿಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆದಿದ್ದಾರೆ. ಅಷ್ಟು ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಂದಲೂ ಈರುಳ್ಳಿ ಸೂಕ್ತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿಯೇ ದಿನದಿಂದ ದಿನಕ್ಕೆ ಈರುಳ್ಳಿ ದರ Onion price ಗಗನಮುಖಿಯಾಗಿದೆ.
ಪರಿಸ್ಥಿತಿ ಗಮನಿಸಿದ್ರೆ, ಇದೇ ರೀತಿ ದರ ಏರಿಕೆ ಮುಂದುವರಿದ್ರೆ ಕೆಜಿಗೆ 80 ರಿಂದ 100 ರೂಪಾಯಿಯಾದ್ರೂ ಅಚ್ಚರಿ ಇಲ್ಲ ಅನ್ನುತ್ತಾರೆ ಸಗಟು ವ್ಯಾಪಾರಿಗಳು.
ರಾಜ್ಯದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆ ಎಂದೆನಿಸಿಕೊಂಡಿರುವ ಯಶವಂತಪುರ ಎಂಪಿಎಂಸಿಗೆ ಈ ಹೊತ್ತಿನಲ್ಲಿ ಎನ್ನಿಲ್ಲ ಅಂದ್ರೂ ಒಂದು ಲಕ್ಷಕ್ಕಿಂತಲೂ ಅಧಿಕ ಮೂಟೆ ಈರುಳ್ಳಿ ಬಂದು ಬೀಳಬೇಕಾಗಿತ್ತು. ಆದರೆ ಈ ಪ್ರಮಾಣ 55 ಸಾವಿರ ಮೂಟೆಗಳಿಗೆ ಸೀಮಿತವಾಗಿದೆ.
ಗದಗ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಗುಜರಾತ್, ಮಧ್ಯ ಪ್ರದೇಶದಲ್ಲೂ ಈ ಬಾರಿ ಮಳೆ ವಿಳಂಭವಾದ ಕಾರಣ ಅಲ್ಲೂ ಬೆಳೆ ಕೈ ಕೊಟ್ಟಿದೆ. ಡಿಸೆಂಬರ್ ಪ್ರಾರಂಭದ ಹೊತ್ತಿಗೆ ಹೊರ ರಾಜ್ಯದ ಈರುಳ್ಳಿಯನ್ನು ನಿರೀಕ್ಷಿಸಲಾಗುತ್ತಿದೆ. ಅಲ್ಲಿಯ ತನಕ ಈ ದರ ಹೀಗೆ ಏರುವ ಎಲ್ಲಾ ಲಕ್ಷಣಗಳಿವೆ.
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಈರುಳ್ಳಿ ಕಿಂಟ್ವಾಲ್ ಗೆ 3800 ರೂಪಾಯಿಗಳಿಂದ 4200 ರೂಪಾಯಿಗೆ ಮಾರಾಟವಾಗಿದೆ. ನಾಫೆಡ್ ( ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ದಿಂದ ಪೂರೈಕೆಯಾದ ಈರುಳ್ಳಿ ದರ ಕ್ವಿಂಟಾಲ್ ಗೆ 4000ರೂ ಗಳಿಂದ 4600 ರೂಪಾಯಿಗೆ ಮಾರಾಟವಾಗಿದೆ.
ಅತ್ಯುತ್ತಮ ಗ್ರೇಡ್ ಈರುಳ್ಳಿ 5000 ಸಾವಿರ ರೂಪಾಯಿಗಳಿಂದ 6000 ಸಾವಿರ ರೂಪಾಯಿಗೆ ವ್ಯಾಪಾರವಾಗಿದೆ. ಮಾರುಕಟ್ಟೆಯಲ್ಲೇ ದರ ಇಷ್ಟಾದ್ರೆ, ಸಾಗಾಟ ವೆಚ್ಚ, ಕೂಲಿ, ಮತ್ತಿತರ ದರ ಎಂದು ಸೇರಿ ಚಿಲ್ಲರೆ ಮಾರುಕಟ್ಟೆಗೆ ಈರುಳ್ಳಿ ಬರುವ ಹೊತ್ತಿಗೆ ಈರುಳ್ಳಿ ಕಣ್ಣೀರು ತರಿಸೋದು ಪಕ್ಕಾ
Discussion about this post