ಲಸಿಕೆ ಪಡೆದಿದ್ದೇವೆ, ಒಂದ್ಸಲ ಸೋಂಕು ಬಂದಿದೆ ಅನ್ನುವ ಉಡಾಫೆ ಬೇಡ. ಡೆಲ್ಪಾ ಗೆದ್ದು, ಎರಡು ಡೋಸ್ ಪಡೆದರೂ ಒಮಿಕ್ರೋನ್ ತಗುಲುತ್ತದೆ
ಬೆಂಗಳೂರು : ಕೊರೋನಾ ಸೋಂಕಿನ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಮಂದಿ ಸ್ವಯಂ ಘೋಷಿತ ತಜ್ಞರು ಹುಟ್ಟುಕೊಂಡಿದ್ದಾರೆ. ಅವರವರ ಭಾವಕ್ಕೆ ತಕ್ಕಂತೆ ಮಾತನಾಡುವ ಅವರು ಜನರ ಹಾದಿ ತಪ್ಪಿಸುತ್ತಿದ್ದಾರೆ. 2 ಡೋಸ್ ಲಸಿಕೆ ಪಡೆದ ಮೇಲೆ ನೀವೆಲ್ಲಾ ಸೇಫ್, ಒಂದ್ಸಲ ಸೋಂಕು ತಗುಲಿದ್ರೆ ಮತ್ತೆ ಕೊರೋನಾ ಬರೋದಿಲ್ಲ, ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ ಅಂತಾರೆ. ಆದರೆ ಅವೆಲ್ಲಾ ಸುಳ್ಳು ಅನ್ನುವುದು ಇದೀಗ ಸಾಬೀತಾಗಿದೆ. ಇದಕ್ಕೊಂದು ಉದಾಹರಣೆ ದಕ್ಷಿಣ ಆಫ್ರಿಕಾದ ಬಂದ ವ್ಯಕ್ತಿಗೆ ತಗುಲಿದ ಒಮಿಕ್ರೋನ್ ಸೋಂಕು.
ನವೆಂಬರ್ ಕೊನೆಯ ವಾರದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ಕೊರೋನಾ ನೆಗೆಟಿವ್ ಬಂದಿತ್ತು. ನಿಯಮಗಳಂತೆ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ಬಳಿಕ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಒಮಿಕ್ರೋನ್ ಬಗ್ಗೆ ಜಾಗೃತರಾಗಿದ್ದ ಅವರು ಬಿಬಿಎಂಪಿ ಮೂಲಕ ರೂಪಾಂತರ ಪರೀಕ್ಷೆ ಮಾಡಿದಾಗ ಒಮಿಕ್ರೋನ್ ದೃಢಪಟ್ಟಿತ್ತು. ಜೊತೆಗೆ ದಕ್ಷಿಣ ಆಫ್ರಿಕಾದಿಂದ ಬಂದ ತಕ್ಷಣ ಯಾರೊಂದಿಗೂ ಸಂಪರ್ಕ ಹೊಂದಿರಲಿಲ್ಲ, ಹೀಗಾಗಿ ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡಲಿಲ್ಲ.
ಈ ನಡುವೆ ಕೊರೋನಾ ಪಾಸಿಟಿವ್ ಬಂದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಈ ವ್ಯಕ್ತಿ 10 ದಿನಗಳ ಚಿಕಿತ್ಸೆ ಬಳಿಕ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಗಮನಾರ್ಹ ಅಂಶ ಅಂದ್ರೆ ಈ ವ್ಯಕ್ತಿಗೆ ಎರಡನೇ ಅಲೆ ಸಂದರ್ಭದಲ್ಲಿ ಡೆಲ್ಟಾ ಸೋಂಕು ತಗುಲಿತ್ತು. ಆದಾದ ಬಳಿಕ ಅವರು ಎರಡು ಡೋಸ್ ಕೊರೋನಾ ಲಸಿಕೆಯನ್ನೂ ಪಡೆದಿದ್ದರು. ಹಾಗಿದ್ದರೂ ಅವರಿಗೆ ಮತ್ತೆ ಒಮಿಕ್ರೋನ್ ತಗುಲಿದೆ ಅಂದ್ರೆ, ಹೊಸ ರೂಪಾಂತರಿ ವೈರಸ್ ನ ತಾಕತ್ತು ಏನಿರಬೇಕು.
ಹೀಗಾಗಿಯೇ ರೂಪಾಂತರಿಯ ಬಗ್ಗೆ ನಿರ್ಲಕ್ಷ್ಯ ಬೇಡ, ಲಸಿಕೆ ಪಡೆದಿದ್ದೇವೆ, ಒಂದ್ಸಲ ಸೋಂಕು ಬಂದಿದೆ ಅನ್ನುವ ಉಡಾಫೆ ಬೇಡ. ಡೆಲ್ಪಾ ಗೆದ್ದು, ಎರಡು ಡೋಸ್ ಪಡೆದರೂ ಒಮಿಕ್ರೋನ್ ತಗುಲುತ್ತದೆ ಅಂದ್ರೆ ಲಸಿಕೆ ಪಡೆಯದ, ಈ ವರೆಗೆ ಸೋಂಕಿಗೆ ಒಳಗಾದವರನ್ನು ರೂಪಾಂತರಿ ವೈರಸ್ ಅದ್ಯಾವ ಮಟ್ಟಿಗೆ ಪೀಡಿಸಬಹುದು ಊಹಿಸಿ.
ಇನ್ನು ಬೌರಿಂಗ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಕರ್ನಾಟಕ ತಾತ್ಕಾಲಿಕವಾಗಿ ಒಮಿಕ್ರೋನ್ ಮುಕ್ತವಾಗಿದೆ. ಈ ಹಿಂದೆ ಎರಡು ಪ್ರಕರಣಗಳು ಪತ್ತೆಯಾಗಿತ್ತು. ಆ ಪೈಕಿ ಒಬ್ಬ ಈಗಾಗಲೇ ನಕಲಿ ನೆಗೆಟಿವ್ ಸರ್ಟಿಫಿಕೆಟ್ ಕೊಟ್ಟು ವಿದೇಶಕ್ಕೆ ಪರಾರಿಯಾಗಿದ್ದಾನೆ.
Discussion about this post