ಶೇಕ್ ಇಟ್ ಪುಷ್ಪವತಿ ಹಾಡಿಗೆ ಕುಣಿದಿದ್ದ ಮಂಗಳೂರಿನ ನಿಮಿಕಾ ರತ್ನಾಕರ್ ( Nimika Ratnakar )
ನಾಯಕ ಪ್ರಧಾನ ಚಿತ್ರಗಳನ್ನೇ ಮಾಡುತ್ತಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಬಾರಿ ಮಹಿಳಾ ಪ್ರಧಾನ ಸಿನಿಮಾ ಮೂಲಕ ಬಂದಿದ್ದಾರೆ. ಸಿನಿಮಾ ಮುಹೂರ್ತವೂ ಸದ್ದಿಲ್ಲದೆ ನೆರವೇರಿದ್ದು, ಚಿತ್ರಕ್ಕೆ ಫೀನಿಕ್ಸ್ ಎಂಬ ಟೈಟಲ್ ಅಂತಿಮವಾಗಿದೆ. ನಿಮಿಕಾ ರತ್ನಾಕರ್ ( Nimika Ratnakar ) ಇಲ್ಲಿ ನಾಯಕಿಯಾಗಿ 3ನೇ ಬಾರಿಗೆ ರಗಡ್ ನಿರ್ದೇಶಕರ ಗರಡಿ ಸೇರಿದ್ದಾರೆ.
ಲಾಕಪ್ ಡೆತ್, ಹುಚ್ಚ, ಎಕೆ 47, ಕಲಾಸಿಪಾಳ್ಯ, ಮತ್ತು ಅಯ್ಯ, ಹುಚ್ಚ-2, ತ್ರಿಶೂಲಂ ಸೇರಿದಂತೆ ಹಲವು ಮಾಸ್ ಚಿತ್ರಗಳನ್ನು ನೀಡಿದ ಓಂ ಪ್ರಕಾಶ್ ಅವರು ಈಗ ಫೀನಿಕ್ಸ್ನೊಂದಿಗೆ ಮಹಿಳಾ ಕೇಂದ್ರಿತ ಚಿತ್ರ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ಓಂ ಪ್ರಕಾಶ್ ರಾವ್ ಚಿತ್ರಗಳಂದ್ರೆ ಬೇರೆಯದ್ದೇ ಕಲ್ಪನೆಗಳಿದೆ. ಹಾಗಿರುವಾಗ ಮಹಿಳಾ ಪ್ರಧಾನ ಚಿತ್ರ ಹೇಗೆ ಮೂಡಿಬರಬಹುದು.

ಗಮನಾರ್ಹ ಅಂಶ ಅಂದ್ರೆ ಓಂ ಪ್ರಕಾಶ್ ರಾವ್ ಚಿತ್ರಗಳ ಹಿಂದಿರುವ ಎಂ.ಎಸ್.ರಮೇಶ್, ಈ ಬಾರಿಯೂ ಫೀನಿಕ್ಸ್ ಚಿತ್ರ ತಂಡದ ಜೊತೆಗಿದ್ದಾರೆ. ಹೀಗಾಗಿ ಮಹಿಳಾ ಪ್ರಧಾನ ಚಿತ್ರದಲ್ಲಿ ಡೈಲಾಗ್ಗಳು ಹೇಗೆ ಇರುತ್ತವೆ ಅನ್ನೋ ಕುತೂಹಲವೂ ಚಿತ್ರ ಪ್ರೇಮಿಗಳಲ್ಲಿದೆ.
ಫೀನಿಕ್ಸ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿರುವ ಓಂ ಪ್ರಕಾಶ್ ರಾವ್, ರಿಮೇಕ್ ಚಿತ್ರಗಳಿಗೆ ಬ್ರೇಕ್ ಹಾಕಿ ಈ ಬಾರಿ ಸ್ವಮೇಕ್ ಚಿತ್ರ ನಿರ್ದೇಶಿಸುತ್ತಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕಿಯರಾಗಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ತ್ರಿಶಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಜರ್ಮನ್ ಹಾಗೂ ಆಸ್ಟ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಇದು ನನ್ನ ನಿರ್ದೇಶನದ 49ನೇ ಚಿತ್ರ ಅಂದಿದ್ದಾರೆ.

ಇನ್ನು ಹೊಸ ಪ್ರಾಜೆಕ್ಟ್ ಬಗ್ಗೆ ಮಾತನಾಡಿರುವ ನಟಿ ನಿಮಿಕಾ ರತ್ನಾಕರ್, ಈ ಹಿಂದೆ ಓಂಪ್ರಕಾಶ್ ರಾವ್ ಅವರ ನಿರ್ದೇಶನದ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಚಿತ್ರದ ಶೀರ್ಷಿಕೆ ಕೇಳಿ ನನಗೆ ಈ ಚಿತ್ರದಲ್ಲಿ ನಟಿಸೋ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯ್ತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ‘ಕ್ರಾಂತಿ’ ಸಿನಿಮಾದಲ್ಲಿ ‘ಶೇಕ್ ಇಟ್ ಪುಷ್ಪವತಿ..’ ಎಂದು ಹಾಡಿ ಕುಣಿದಿದ್ದ ನಟಿ ನಿಮಿಕಾ ರತ್ನಾಕರ್.

ಉಳಿದಂತೆ, ಕಾಕ್ರೋಚ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಎಂ ಎಸ್ ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ವಿಜಯನ್ ಸಾಹಸ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Discussion about this post