ಮೈಸೂರು : ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಸರ್ಕಾರ ಕೊಡುತ್ತಿರುವ ಭರವಸೆಗಳನ್ನು ನೋಡಿದರೆ ರಾಮರಾಜ್ಯವನ್ನು ನಾಚಿಸುವಂತಿದೆ ಕರ್ನಾಟಕದ ವ್ಯವಸ್ಥೆ. ಆದರೆ ಎಲ್ಲಾ ಭರವಸೆ ಕಾಗದ ಪತ್ರಗಳಲ್ಲಿದೆ.
ಬೆಡ್ ಕೇಳಿ ಕೊರತೆ ಇಲ್ಲ ಅಂತಾರೆ, ಆಕ್ಸಿಜನ್ ಕೇಳಿ ರೆಡಿ ಅಂತಾರೆ, ಲಸಿಕೆ ಕೇಳಿದ್ರೆ ಜಾಗತಿಕ ಟೆಂಡರ್ ಅಂತಾರೆ. ಆದರೆ ಬೆಡ್ ಕೊರತೆಯನ್ನು ಸರಿ ಮಾಡಲು ರಾಜ್ಯ ಸರ್ಕಾರ ಇನ್ನ ಸಾಧ್ಯವಾಗಿಲ್ಲ. ಹಳ್ಳಿಗಳಲ್ಲಿ ಕೊರೋನಾ ರಣ ಕೇಕೆ ಪ್ರಾರಂಭವಾದರೆ ಜನರನ್ನು ಎಲ್ಲಿ ಸೇರಿಸಿಕೊಳ್ಳುತ್ತಾರೋ ದೇವರಿಗೆ ಗೊತ್ತು.
ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಕೈ ಮೀರಿದೆ ಅಂದ್ರೆ ಕೊರೋನಾ ವಾರಿಯರ್ಸ್ ಗಳ ಕುಟುಂಬಸ್ಥರು ಕೊರೋನಾ ಸೋಂಕಿಗೆ ತುತ್ತಾದ್ರೆ ಬೆಡ್ ವ್ಯವಸ್ಥೆ ಇಲ್ಲ. ಇದಕ್ಕೊಂದು ಉದಾಹರಣೆ ಇಂದು ನಡೆದ ಘಟನೆ.
ಮೈಸೂರಿನಲ್ಲಿ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಟಿ ನರಸೀಪುರ ತಾಲೂಕು ಬನ್ನೂರಿನ ಚಾಮನಹಳ್ಳಿಯ ನಿವಾಸಿ ಕನ್ಯಾಕುಮಾರಿ ಎಂಬುವವರ ಪತಿ ಸ್ವಾಮಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು.
ತಾಲೂಕು ಆಸ್ಪತ್ರೆಯ ವೈದ್ಯರು ಹಾಗೂ ಮೈಸೂರಿನ ಆಸ್ಪತ್ರೆಯ ವೈದ್ಯರು ಪತಿಯನ್ನು ಮನೆಯಲ್ಲಿಯೇ ಐಸೋಲೇಷನ್ ನಲ್ಲಿ ಇರಿಸುವಂತೆ ಸೂಚಿಸಿದ್ದರು. ಆದರೆ, ಅವರ ಆಕ್ಸಿಜನ್ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿತ್ತು. ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಸೇರಿಸಲು ಕನ್ಯಾಕುಮಾರಿ ನಿರ್ಧರಿಸಿದರು. ಈ ವೇಳೆ ಕೋವಿಡ್ ಮಿತ್ರ ಸಹಾಯ ಕೇಳಿದರೂ ಸಹಾಯ ಸಿಗಲಿಲ್ಲ. ಜಿಲ್ಲಾ ವಾರ್ ರೂಮ್ ನಿಂದಲೂ ಯಾವುದೇ ಸ್ಪಂದನೆ ಸಿಗಲಿಲ್ಲ. ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಅಲ್ಲಿನ ಸಿಬ್ಬಂದಿಗಳು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಎಲ್ಲಾ ಸರ್ಕಾರಿ ಆಸ್ಪತ್ರೆ ಸುತ್ತಾಡಿದರೂ ಎಲ್ಲೂ ಚಿಕಿತ್ಸೆ ಸಿಗಲಿಲ್ಲ. ಖಾಸಗಿ ಆಸ್ಪತ್ರೆಗೆ ತೆರಳಿದರೆ ಮೊದಲೇ ರೂ.50,000 ಕಟ್ಟುವಂತೆ ತಿಳಿಸಿದರು ಎಂದು ಕನ್ಯಾಕುಮಾರಿ ವ್ಯವಸ್ಥೆ ಕುರಿತು ಬೇರಸ ವ್ಯಕ್ತಪಡಿಸಿದರು.
ಬಳಿಕ ಮಂಡ್ಯ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿನ ವೈದ್ಯರು ಹಾಸಿಗೆ ಖಾಲಿಯಿಲ್ಲ ಎಂದು ವಾಪಾಸ್ ಕಳುಹಿಸಿದ್ದಾರೆ.
ವಿಷಯ ತಿಳಿದ ಉಳಿದ ಆಶಾ ಕಾರ್ಯಕರ್ತೆಯರು ಹಾಗೂ ಸಂಘಟನೆಯ ಕಾರ್ಯಕರ್ತರು ಧ್ವನಿ ಎತ್ತಿದ ಬಳಿಕ ಎಚ್ಚೆತ್ತ ಮೈಸೂರು ಜಿಲ್ಲಾಧಿಕಾರಿಗಳು ಹಾಸಿಗೆ ಒದಗಿಸಿಕೊಡುವ ಭರವಸೆ ನೀಡಿದರು. ಆದರೆ ಕೋವಿಡ್ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ಸಿಬ್ಬಂದಿಗಳು ಮತ್ತೆ ಹಾಸಿಗೆ ಇಲ್ಲ ಎಂದು ಹೇಳಿದ್ದಾರೆ. ಕೊನೆಗೆ ನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆಯಾಗಿದೆ.
ಸಮಾಜದ ಆರೋಗ್ಯ ಸಲುವಾಗಿ ಓಡಾಡುವ ಆಶಾ ಕಾರ್ಯಕರ್ತೆಯ ಸಂಬಂಧಿಕರಿಗೆ ಬೆಡ್ ವ್ಯವಸ್ಥೆ ಮಾಡಲಾಗಲಿಲ್ಲ ಅಂದ್ರೆ ಈ ಸರ್ಕಾರಕ್ಕೆ ಅದ್ಯಾವ ನೈತಿಕತೆ ಇದೆ ಹೇಳಿ.
Discussion about this post