ಮಂಗಳೂರು : ಕರಾವಳಿಯಲ್ಲಿ ಒಂದಿಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ನೈತಿಕ ಪೊಲೀಸ್ ಗಿರಿ ಮತ್ತೆ ತಲೆ ಎತ್ತಿದೆ. ಕೆಲ ದಿನಗಳ ಹಿಂದೆ ದೇವಸ್ಥಾನಕ್ಕೆ ಬಂದಿದ್ದ ಗೆಳೆಯರ ಗುಂಪಿನ ಮೇಲೆ ದಾಳಿ ನಡೆದಿತ್ತು. ಇದೀಗ ಪುತ್ತೂರಿನಲ್ಲಿ ಇಂತಹುದೇ ಪ್ರಕರಣ ವರದಿಯಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹುಲಿಗೆಯ್ಯ ಅನ್ನುವವರ ಪುತ್ರ ಹನುಮಂತರಾಯ (19) ಅನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾಲ್ಕರಿಂದ 5 ಜನ ಮುಸ್ಲಿಂ ಮಾತನಾಡುವ ಅಪರಿಚಿತ ಯುವಕರ ವಿರುದ್ಧ ಐಪಿಸಿ ಸೆಕ್ಷನ್ 143,147,341,504,323,506 ಮತ್ತು 149ರ ಅನ್ವಯ ಪ್ರಕರಣ ದಾಖಲಾಗಿದೆ.
ಹನುಮಂತರಾಯ ತನ್ನ ಮಿತ್ರ ಚೌಡಯ್ಯ ಅನ್ನುವವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯನ್ನು ಭೇಟಿಯಾಗಲು ರಾಯಚೂರಿನಿಂದ ಪುತ್ತೂರಿಗೆ ಆಗಮಿಸಿದ್ದ. ಈ ವೇಳೆ ಯುವತಿಯ ಗೆಳತಿ ಸೇರಿದಂತೆ ನಾಲ್ವರು ಪುತ್ತೂರು ಬಸ್ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ದಾಳಿ ಅಪರಿಚಿತರ ಗುಂಪು ಹನುಮಂತರಾಯ ಅವರನ್ನು ಬೆದರಿಸಿದೆ.
ಇನ್ನು ಹನುಮಂತರಾಯ ಅವರ ದೂರಿನ ಸಾರಾಂಶದ ಪ್ರಕಾರ, ಹಲ್ಲೆ ಮಾಡಿದವರು 25 ರಿಂದ 28 ವಯಸ್ಸಿನವರಾಗಿದ್ದು, ಅವರೆಲ್ಲರೂ ಮುಸ್ಲಿಂ ಭಾಷೆಯಲ್ಲಿ ಮಾತನಾಡುತ್ತಿದ್ದರಂತೆ. ರಾಯಚೂರಿನ ಹುಡುಗರ ಊರು ವಿವರ ವಿಚಾರಿಸಿದ ತಂಡ ಅವಾಚ್ಯ ಶಬ್ಧಗಳಿಂದ ಬೈದು, ನಮ್ಮ ಊರಿಗೆ ಬಂದು ನಮ್ಮ ಜಾತಿಯ ಹುಡುಗಿಯರೊಂದಿಗೆ ಮಾತನಾಡುತ್ತೀರಾ, ನಿಮಗೆಷ್ಟು ಅಹಂಕಾರ ಎಂದು ಬೆದರಿಸಿದ್ದಾರಂತೆ. ಜೊತೆಗೆ ಹೊಡೆದು ಕಾಲಿನಿಂದ ತುಳಿದು ಹುಡುಗಿಯರ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರಂತೆ.
Discussion about this post